ಯಾವುದೇ ವಿಭಾಗದಲ್ಲಿ ಒಬ್ಬ ವ್ಯಕ್ತಿ ಉತ್ತುಂಗಕ್ಕೇರಬೇಕಾದರೆ ಆತ ಶ್ರಮಪಡಬೇಕು. ಆ ಶ್ರಮದಿಂದಲೇ ಆತ ಆ ವಿಭಾಗದಲ್ಲಿ ಉತ್ತುಂಗಕ್ಕೇರಬೇಕು. ಆಗ ಮಾತ್ರ ಆತನಿಗೆ ಉತ್ತುಂಗಕ್ಕೇರಿದ ಹಿಂದಿನ ಕಷ್ಟವು ಗೊತ್ತಿರುತ್ತದೆ. ಆದರೆ ಸುಲಭದಾರಿಯಿಂದ ಉತ್ತುಂಗಕ್ಕೇರಿದವರಿಗೆ ಆ ಪದವಿಯನ್ನು ಪಡೆಯಲು ಬೇಕಾದ ಶ್ರಮದ ಬಗ್ಗೆ ಗೊತ್ತಿರುವುದಿಲ್ಲ. ಆಗ ಆ ಗೌರವದ ಸ್ಥಾನ ದುರುಪಯೋಗವಾಗುತ್ತದೆ. ಇದಕ್ಕೆ ಉದಾಹರಣೆ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ.
ನಮ್ಮ ಕಣ್ಣ ಮುಂದೆ ನೂರಾರು ಮಹಾನ್ ವ್ಯಕ್ತಿಗಳು ಇದ್ದಾರೆ. ಅವರಲ್ಲಿ ಕೆಲವರು ಝೀರೋದಿಂದ
ಹೀರೋಗಳಾದವರು. ಇದು ಉದ್ಯಮ, ಸಾಮಾಜಿಕ ಗೌರವ, ವಿಜ್ಞಾನ ರಂಗ ಸೇರಿದಂತೆ ರಾಜಕೀಯ ರಂಗದಲ್ಲಿಯೂ ಇದೆ.
ಯಡಿಯೂರಪ್ಪ, ದೇವೆಗೌಡ, ಸಿದ್ದರಾಮಯ್ಯ ಅವರಂತಹ ನಾಯಕರು ಬಳುವಳಿಯಾಗಿ
ನಾಯಕತ್ವ ಪಡೆದಿಲ್ಲ. ಹೋರಾಟದಲ್ಲಿ ಆ ನಾಯಕತ್ವ ಪಡೆದುಕೊಂಡಿದ್ದಾರೆ. ಅವರಿಗೆ ಆ ಸ್ಥಾನಕ್ಕೇರಲು ಇರುವ
ಕಷ್ಟಗಳು ಗೊತ್ತು. ಆದರೆ ಆ ಕಷ್ಟಗಳು ಯಡಿಯೂರಪ್ಪ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ, ದೇವೆಗೌಡರ
ಮಕ್ಕಳಾದ ರೇವಣ್ಣ, ಕುಮಾರಸ್ವಾಮಿ, ಸಿದ್ದರಾಮಯ್ಯ ಮಗ ಯತೀಂದ್ರ ಅವರಿಗೆ ಗೊತ್ತಿಲ್ಲ. ಅವರು ಅಪ್ಪನ
ಪ್ರಭಾವದಲ್ಲಿ ರಾಜಕೀಯದಲ್ಲಿ ಉಳಿದುಕೊಂಡಿದ್ದಾರೆ.
ಆ ಪ್ರಭಾವ ಇರದಿದ್ದರೆ ಇಂದು ಇವರುಗಳು ರಾಜಕೀಯದಲ್ಲಿ ಕಾಣಿಸಿಕೊಳ್ಳುತ್ತಲೆ ಇರಲಿಲ್ಲ.
ಇನ್ನು ಇತ್ತೀಚೆಗಿನ ವಿದ್ಯಮಾನದಲ್ಲಿ ಮಾಜಿ ಪ್ರಧಾನಿ ದೇವೆಗೌಡರ ಮೂರನೇ
ತಲೆಮಾರು ದೇಶದ ರಾಜಕೀಯದಲ್ಲಿ ಕಪ್ಪುಚುಕ್ಕೆಯಾಗಿದ್ದಾರೆ. ದೇವೆಗೌಡರದ ಪುತ್ರ ರೇವಣ್ಣ ಅವರ ಪುತ್ರರಿಬ್ಬರು
ಮಾಡಿದ ಘನಂದಾರಿ ಕೆಲಸಗಳು ರಾಜಕೀಯದಲ್ಲಿ ದೊಡ್ಡ ಹೆಸರನ್ನೆ ಮಾಡಿದ ದೇವೆಗೌಡರ ಗೌರವವನ್ನು ಮಣ್ಣುಪಾಲಾಗಿಸಿದೆ.
ದೇವೆಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣರಿಗೆ
ಅಧಿಕಾರವೆಂಬುದು ಜನಿಸುತ್ತಲೆ ಬಂದ ಕೊಡುಗೆ. ದೇವೆಗೌಡರು ತನ್ನ ಕುಟುಂಬದ ಏಳಿಗೆಗಾಗಿ ಮಾಡಿದ ಪ್ರಯತ್ನದಿಂದ
ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಸುಲಭದಲ್ಲಿ ಅಧಿಕಾರ ಪಡೆದುಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣರಿಗೆ
ಹಾಸನದ ಸಂಸದರಾಗುವ ಮತ್ತು ಸೂರಜ್ ರೇವಣ್ಣರಿಗೆ ವಿಧಾನಪರಿಷತ್
ಸದಸ್ಯರಾಗುವ ಸುಲಭದ ಮಾರ್ಗವನ್ನು ಅಜ್ಜ ನೀಡಿದ್ದರು. ಗ್ರಾಮ ಪಂಚಾಯತ್ ಸದಸ್ಯರಾಗಲೂ ಹೋರಾಟ ಮಾಡಿದ
ಕಾರ್ಯಕರ್ತರಿಗೆ ಸಿಗದ ಟಿಕೆಟ್ ಪ್ರಜ್ವಲ್ ಮತ್ತು ಸೂರಜ್ ಗೆ ಉನ್ನತ ಸ್ಥಾನ ಪಡೆಯಲು ಸಿಕ್ಕಿದೆ. ಹೋರಾಟ ಏನೆಂಬುದೆ ತಿಳಿಯದ ಇವರು ಸುಲಭವಾಗಿ ಸಂಸದ, ಎಂ ಎಲ್
ಸಿ ಆಗಿಬಿಟ್ಟರು.
ಇದರ ಪರಿಣಾಮವೇ ಆ ಸ್ಥಾನದ ಗೌರವ ಮಣ್ಣುಪಾಲಾದದ್ದು. ಹಲವು ಯುವತಿಯರಿಗೆ ಲೈಂಗಿಕ
ಕಿರುಕುಳ ನೀಡಲು ಪ್ರಜ್ವಲ್ ರೇವಣ್ಣ ಸಂಸದ ಸ್ಥಾನವನ್ನು ದುರುಪಯೋಗಪಡಿಸಿಕೊಂಡರೆ, ತನಗೆ ಸಿಕ್ಕಿದ
ಮೇಲ್ಮನೆ ಸ್ಥಾನದ ಗೌರವವನ್ನು ಅಸಹಜ ಲೈಂಗಿಕ ಕ್ರಿಯೆಯಿಂದ ಸೂರಜ್ ರೇವಣ್ಣ ದುರುಪಯೋಗಪಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಸುಲಭವಾಗಿ ಸಿಕ್ಕ ಉನ್ನತ ಸ್ಥಾನಗಳಿಂದ ದುರುಪಯೋಗ
ಜಾಸ್ತಿ ಎಂಬುದಕ್ಕೆ ಇವರಿಬ್ಬರು ಉದಾಹರಣೆಯಾಗಿದ್ದಾರೆ.
Social Icons