Editorial| ಪ್ರವೇಶ ಪರೀಕ್ಷೆಗಳು ವಿದ್ಯಾರ್ಥಿಗಳ ವಿಕಾಸಕ್ಕೆ ಮುನ್ನುಡಿಯಾಗಲಿ, ವಿನಾಶಕ್ಕಲ್ಲ|

 ಇಂದು ಎಲ್ಲಾ ಕ್ಷೇತ್ರದಲ್ಲೂ ಪರೀಕ್ಷೆಗಳು ಇವೆ. ಒಂದು ಹಂತದಿಂದ ಮತ್ತೊಂದು ಹಂತಕ್ಕೆ, ಹೊಸ ಅವಕಾಶಗಳನ್ನು ಪಡೆಯುವ ಸಲುವಾಗಿ ಇರುವ ಕೊಂಡಿಗಳು ಈ ಪ್ರವೇಶ ಪರೀಕ್ಷೆಗಳು. ಈ ಹಿಂದಿನ ಕೆಲ ವರ್ಷಗಳವರೆಗೆ ಯಾವುದೇ ಕಳಂಕ, ಭ್ರಷ್ಟಾಚಾರದ ವಾಸನೆಯಿಲ್ಲದೆ ನಡೆಯುತ್ತಿದ್ದ ಪರೀಕ್ಷೆಯ ವಿಭಾಗಗಳಿಗೆ ಕೂಡ ಈಗ ಕಳಂಕ ಮೆತ್ತಿಕೊಳ್ಳುತ್ತಿದೆ. ವಿದ್ಯಾರ್ಥಿಗಳ ವಿಕಾಸಕ್ಕೆ ಕಾರಣವಾಗಬೇಕಿದ್ದ ಪರೀಕ್ಷೆಗಳು ವಿದ್ಯಾರ್ಥಿಗಳ ವಿನಾಶಕ್ಕೂ ಕಾರಣವಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ನೀಟ್ -2024ರ ಫಲಿತಾಂಶ.



ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ನೀಟ್ ಸ್ಪರ್ಧಾತ್ಮಕ ಪರೀಕ್ಷೆಗೆ ಈ ಬಾರಿ 24 ಲಕ್ಷ ವಿದ್ಯಾರ್ಥಿಗಳು ಬರೆದಿದ್ದಾರೆ. ಆದರೆ ಫಲಿತಾಂಶದ ನಂತರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿದೆ. 67 ವಿದ್ಯಾರ್ಥಿಗಳಿಗೆ 720/720 ಅಂಕಗಳು ಬಂದಿವೆ. ಇದುವರೆಗೂ ಯಾವುದೇ ಕಾರಣಕ್ಕೂ ಗ್ರೇಸ್ ಅಂಕ ಕೊಡುವಂತಿಲ್ಲ ಎಂದು ನೀತಿ ರೂಪಿಸಲಾಗಿದೆ. ಆದರೆ ನಿಯಮ ಉಲ್ಲಂಘಿಸಿ ಸಮಯದ ಅಭಾವದ ನೆಪವೊಡ್ಡಿ ಗ್ರೇಸ್ ಅಂಕ ಕೊಡಲಾಗಿತ್ತು. ನಂತರ ಅದನ್ನು ರದ್ದುಪಡಿಸಿದ ಕಾರಣದಿಂದ 1,563 ವಿದ್ಯಾರ್ಥಿಗಳು ಈ ಅಂಕಗಳನ್ನು ಕಳೆದುಕೊಂಡಿದ್ದಾರೆ. ಗುಜರಾತ್‌ನ 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ, ಒಂದು ವಿಷಯದಲ್ಲಿ ಫೇಲಾದ ವಿದ್ಯಾರ್ಥಿ ನೀಟ್‌ನಲ್ಲಿ 705 ಅಂಕ ಪಡೆದಿದ್ದಾರೆ. ರಾಜಸ್ಥಾನದ ಒಂದು ಕೇಂದ್ರದಲ್ಲಿ ಕ್ರಮಸಂಖ್ಯೆ 61-66ರವರೆಗಿನ ಆರು ವಿದ್ಯಾರ್ಥಿಗಳಿಗೆ 670 ಅಂಕ ಬಂದಿದೆ.

ಇಡೀ ದೇಶವನ್ನು ಗಮನಿಸಿದರೆ ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಯುಎಂಎಸ್, ಬಿಎಚ್‌ಎಂಎಸ್ ಒಳಗೊಂಡಂತೆ ವೈದ್ಯಕೀಯ ಸೀಟುಗಳ ಸಂಖ್ಯೆ 1 ಲಕ್ಷದ 6 ಸಾವಿರ. ಆದರೆ ಇದಕ್ಕಾಗಿ 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕರ್ನಾಟಕದಲ್ಲಿ 9,345 ಸೀಟುಗಳಿವೆ. 1 ಲಕ್ಷದ 19 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಆಯ್ಕೆಯಾದ 1 ಲಕ್ಷ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಅಂದರೆ ಉಳಿದ 23 ಲಕ್ಷ ವಿದ್ಯಾರ್ಥಿಗಳ ಪಾಡೇನು? ಅವರು ಕೌಟುಂಬಿಕ ಒತ್ತಡಕ್ಕೆ ಮಣಿದು ಮರಳಿ ಮತ್ತೊಮ್ಮೆ, ಮಗದೊಮ್ಮೆ ನೀಟ್ ಪರೀಕ್ಷೆ ಬರೆಯುವರೇ? ಸತತ ಪ್ರಯತ್ನದ ನಂತರವೂ ಪ್ರವೇಶ ದೊರಕದೆ ಹೋದರೆ ಈ ವಿದ್ಯಾರ್ಥಿಗಳು ಯಾವ ದಾರಿ ಕಂಡುಕೊಳ್ಳುತ್ತಾರೆ? ಹಲವರು ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತೀ ವರ್ಷ ಈ ರೀತಿ ಹತಾಶರಾದ, ಖಿನ್ನತೆಗೊಳಗಾದ 23 ಲಕ್ಷ ವಿದ್ಯಾರ್ಥಿಗಳು ಉತ್ಪತ್ತಿಯಾಗುತ್ತಿದ್ದಾರೆ. ಈ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮಾಡು ಇಲ್ಲವೇ ಮಡಿಎನ್ನುವ ಬೀಜ ಬಿತ್ತಿ ವೈದ್ಯಕೀಯ ಪ್ರವೇಶ ಪಡೆಯದೇ ಹೋದರೆ ಬದುಕೇ ವ್ಯರ್ಥ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಕಳೆದ ಎಂಟು ವರ್ಷಗಳಲ್ಲಿ 12ನೇ ತರಗತಿ/ಪಿಯುಸಿನಲ್ಲಿ ಅತ್ಯುತ್ತಮ ಅಂಕ ಗಳಿಸಿಯೂ ನೀಟ್ ಕಾರಣಕ್ಕೆ ವೈದ್ಯಕೀಯ ಪ್ರವೇಶ ಪಡೆಯಲು ವಿಫಲರಾದ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೀಗಾಗಿ ಪರೀಕ್ಷೆಗಳು ತಮ್ಮ ಹಿರಿಮೆಯನ್ನು ಉಳಿಸಿಕೊಂಡು, ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವಂತಹ, ಉನ್ನತ ಶಿಕ್ಷಣದ ಶಿಖರವನ್ನೇರಲು ಮೆಟ್ಟಿಲಾಗಬೇಕು. ಇನ್ನು ಮುಂದಕ್ಕಾದರೂ ನೀಟ್ ನಂತಹ ಪರೀಕ್ಷೆಗಳು ಯಾವುದೇ ಕಳಂಕಗಳು, ಆರೋಪಗಳು ಇಲ್ಲದೆ ತಮ್ಮ ಘನತೆಯನ್ನು ಉಳಿಸಿಕೊಂಡು ನಡೆಯುವಂತಾಗಲಿ. ಬಡ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಕನಸುಗಳನ್ನು ನನಸು ಮಾಡಿಕೊಳ್ಳುವಂತಾಗಲಿ.