ಸಂಪಾದಕೀಯ:ಗೌರವ ಕಳೆದುಕೊಳ್ಳುತ್ತಿರುವ ಡಾಕ್ಟರೇಟ್- ವಿವಿಗಳಿಗೆ ಶೋಭೆಯಲ್ಲ! Editorial

 

PHOTO: AI

ಮಂಗಳೂರು ವಿಶ್ವವಿದ್ಯಾನಿಲಯವು ತನ್ನ 42 ನೇ ಘಟಿಕೋತ್ಸವದಲ್ಲಿ ಮೂವರು ಉದ್ಯಮಿಗಳಿಗೆ ಗೌರವ ಡಾಕ್ಟರೇಟ್ ದಯಪಾಲಿಸಿ ಚರ್ಚೆಗೆ ಗ್ರಾಸವಾಗಿದೆ. ಮೂವರು ಉದ್ಯಮಿಗಳು ಗೌರವ ಡಾಕ್ಟರೇಟ್ ಪಡೆಯಲುಇ ಅರ್ಹರೋ , ಅನರ್ಹರೋ ಎಂಬುದು ಬೇರೆ ವಿಷಯ. ಆದರೆ ಮಂಗಳೂರು ವಿಶ್ವವಿದ್ಯಾನಿಲಯ ಈ ಮೂವರು ಉದ್ಯಮಿಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿರುವುದು ವಿವಾದಕ್ಕೆ ಕಾರಣವಾಗಿರುವುದು.

ಮಂಗಳೂರು ವಿಶ್ವವಿದ್ಯಾನಿಲಯ ಮೂವರು ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ತುಂಬೆ ಮೊಯ್ದಿನ್, ರೊನಾಲ್ಡ್ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಈ ಮೂವರು ಆಗರ್ಭ ಶ್ರೀಮಂತರು ಮತ್ತು ಉದ್ಯಮಿಗಳು. ತಮ್ಮ ಉದ್ಯಮ ಬದುಕಿನಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಮಾಡಿದ್ದರೂ ಅವರು ಇಲ್ಲಿ ಕಂಡದ್ದು ಉದ್ಯಮಿಗಳಾಗಿ ಮಾತ್ರ. ಚಿನ್ನದ ಬಟ್ಟಲಲ್ಲಿ ಊಟ ಮಾಡುವ ಸಾಮರ್ಥ್ಯವುಳ್ಳ ಈ ಮೂವರು ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.

 ಈ ಮೂವರ ಆಯ್ಕೆಯಲ್ಲಿ ತಮ್ಮ ಪಾತ್ರವಿಲ್ಲ ಎಂಬುದನ್ನು ಕುಲಪತಿ ಡಾ. ಪಿ ಎಲ್ ಧರ್ಮ ಸೂಚ್ಯವಾಗಿ ತಿಳಿಸಿದ್ದಾರೆ. 12 ಜನರ ಹೆಸರನ್ನು ಕುಲಾಧಿಪತಿಗಳಿಗೆ ಕಳುಹಿಸಲಾಗಿತ್ತು ಎಂದು ಅವರು ಹೇಳಿರುವುದರಿಂದ ಇದರ ಆಯ್ಕೆಯು ಕುಲಾಧಿಪತಿಗಳ ಕಚೇರಿಯಲ್ಲಿ ನಡೆದಂತಿದೆ. ಈ ಮೂವರ ಆಯ್ಕೆಯು ಸಹಜವಾಗಿ ನಡೆದದ್ದಲ್ಲ ಎಂಬ ಅನುಮಾನಗಳನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.

 ಅಷ್ಟಕ್ಕೂ ಈ ಮೂವರಿಗೆ ಗೌರವ ಡಾಕ್ಟರೇಟ್ ನೀಡಬಾರದು ಎಂಬುದೇನು ಇಲ್ಲ.  ಗೌರವ ಡಾಕ್ಟರೇಟ್ ಗಳು ಹಲವು ವಿಶ್ವವಿದ್ಯಾನಿಲಯಗಳಲ್ಲಿ ಬಿಕರಿಯಾಗುತ್ತಿರುವ ಈ ಸಂದರ್ಭದಲ್ಲಿ ಈ ಡಾಕ್ಟರೇಟ್ ಗೌರವವನ್ನು ಈ ಮೂವರಿಗೆ ಮಾತ್ರ ನೀಡಿರುವುದು ಚರ್ಚೆಯ ವಿಷಯ.

ಗೌರವ ಡಾಕ್ಟರೇಟ್ ಗಳನ್ನು ಮಂಗಳೂರು ವಿಶ್ವದ್ಯಾನಿಲಯ ನೀಡುವ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು.  ಆತ ಸಮಾಜಕ್ಕೆ ನೀಡಿರುವ ಕೊಡುಗೆ, ಶೈಕ್ಷಣಿಕ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ಮಾಡಿದ ಸಾಧನೆ, ಆತ ಸಮಾಜದಲ್ಲಿ ಮೂಡಿಸಿದ ಗುಣಾತ್ಮಕ ಪ್ರಭಾವಗಳನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಬಹುದಿತ್ತು. ಆದರೆ ಇಲ್ಲಿ ಮೂವರು ಉದ್ಯಮಿಗಳನ್ನು ಮೂರು ಧರ್ಮಗಳಿಂದ ಆಯ್ಕೆ ಮಾಡಿಕೊಂಡು ಗೌರವ ಡಾಕ್ಟರೇಟ್ ನೀಡಿದಂತಿದೆ.

ಗೌರವ ಡಾಕ್ಟರೇಟ್ ಪಡೆಯಲು ಇವರು ಅನರ್ಹರಲ್ಲದಿದ್ದರೂ ಇವರೆ ಯಾಕೆ ಎಂಬುದು ಸಾಮಾನ್ಯರ ಪ್ರಶ್ನೆಯಾಗಿದೆ. ಒಂದು ವೇಳೆ ಗೌರವ ಡಾಕ್ಟರೇಟ್ ನೀಡುವಾಗ ಒಂದು ಉದ್ಯಮಿಗೆ ನೀಡಿ ಉಳಿದ ಎರಡನ್ನು ಇತರ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಮಾಡಿದವರಿಗೆ ನೀಡಿದ್ದರೆ ಮಂಗಳೂರು ವಿಶ್ವವಿದ್ಯಾನಿಲಯ ಈ ಅಪವಾದದಿಂದ  ದೂರವಾಗುತ್ತಿತ್ತು. ಮುಂದಿನ ವರ್ಷದಲ್ಲಾದರೂ ಗೌರವ ಡಾಕ್ಟರೇಟ್ ನೀಡುವ ಸಂದರ್ಭದಲ್ಲಿ ಗೌರವ ಉಳಿಸಿಕೊಳ್ಳುವ ಕಾರ್ಯವನ್ನು ವಿಶ್ವವಿದ್ಯಾನಿಲಯಗಳು ಮಾಡಬೇಕಾಗಿದೆ.