'ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ' ಎಂಬ ಮಾತಿದೆ. ಇದನ್ನು ಪುಷ್ಟೀಕರಿಸುತ್ತಿದೆ ಇತ್ತೀಚಿನ ಹಲವು ಘಟನೆಗಳು. ಹಿಂದೆಲ್ಲಾ ಕಳ್ಳತನ, ಸುಲಿಗೆ, ದರೋಡೆ ಮೂಲಕ ಹಣ ವಸೂಲಿ ಮಾಡುತ್ತಿದ್ದರೆ, ಬದಲಾದ ಕಾಲಕ್ಕೆ ತಕ್ಕಂತೆ ವಸೂಲಿಯ ವಿಧಾನವೂ ಬದಲಾಗಿದೆ. ಜಗತ್ತು ಆಧುನೀಕರಣಗೊಂಡು, ಹಣಕಾಸು ವ್ಯವಹಾರಗಳೆಲ್ಲ ಡಿಜಿಟಲೀಕರಣಗೊಂಡ ಹಿನ್ನೆಲೆಯಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚಾಗತೊಡಗಿದೆ.
ಹಿಂದಿನ ಕಾಲದ ನೇರ ವಂಚನೆಗಿಂತ ಇದು ಅಪಾಯಕಾರಿ. ಯಾಕೆಂದರೆ ನೇರ ವಂಚನೆಯ ತಂಡದ, ಕೃತ್ಯದ ಬಗ್ಗೆ ಜನ ಬಹು ಬೇಗನೇ ಜಾಗೃತರಾಗಿದ್ದರು. ಆದರೆ ಎಲ್ಲೋ ಮೂಲೆಯಲ್ಲಿ ಕುಳಿತ ಸೈಬರ್ ವಂಚಕರ ಬಗ್ಗೆ ಜನಸಾಮಾನ್ಯರೇಕೆ ಪೊಲೀಸರೇ ಕಂಗಾಲಾಗಿದ್ದಾರೆ. ಯಾಕೆಂದರೆ ಅವರನ್ನು ಸೆರೆ ಹಿಡಿಯುವುದು ಅಷ್ಟು ಸುಲಭವಲ್ಲ. ದೇಶಾದ್ಯಂತ ನಡೆದ ಇಂತಹ ವಂಚನೆ ಪ್ರಕರಣಗಳಲ್ಲಿ ಪೊಲೀಸರು ಸರಿಯಾಗಿ ಭೇದಿಸಿದ ಘಟನೆಗಳು ಒಂದೋ- ಎರಡೋ ಶೇಕಡಾ ಇರಬಹುದಷ್ಟೇ.
ಇತ್ತೀಚೆಗೆ ನೀವೆಲ್ಲಾ ಸೈಬರ್ ವಂಚನೆಗಳ ಬಗ್ಗೆ ಮಾಧ್ಯಮಗಳ ವರದಿ ನೋಡಿರಬಹುದು. ಈ ವಂಚನೆ ದಿನೇ ದಿನೇ ಹೊಸ- ಹೊಸ ವಿಧಾನದಲ್ಲಿ ನಡೆಯುತ್ತಿರುತ್ತದೆ. ಒಂದು ವಂಚನಾ ಪ್ರಕ್ರಿಯೆಯ ಬಗ್ಗೆ ಜನ ಜಾಗೃತರಾದರೆ ಮತ್ತೊಂದು ಹೊಸ ವಿಧಾನದ ಮೂಲಕ ಈ ವಂಚಕರು ಪ್ರತ್ಯಕ್ಷರಾಗುತ್ತಾರೆ.
ಡಿಜಿಟಲ್ ಯುಗದ ಆರಂಭದಲ್ಲಿ ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇವೆ ಎಂದು ಕರೆ ಮಾಡುತ್ತಿದ್ದ ವಂಚಕರು, ಎಟಿಎಂ ಕಾರ್ಡ್ ಎಕ್ಸ್‌ಪೈರಿ ಆಗಿದೆ ಮೊದಲಾದ ತಾಂತ್ರಿಕ ಕಾರಣಗಳನ್ನು ಹೇಳಿ ಅಪ್‌ಡೇಟ್ ಮಾಡುವ ಸೋಗಿನಲ್ಲಿ ಡಿಟೈಲ್ ಪಡೆದು ಹಣ ದೋಚುತ್ತಿದ್ದರು. ಇಂತಹ ವಂಚನಾ ಜಾಲಕ್ಕೆ ಸಾವಿರಾರು ಜನ ಬಲಿಯಾಗಿ ಹಣ ಕಳೆದುಕೊಂಡಿದ್ದರು. ಹೆಚ್ಚೇಕೆ ಕರ್ನಾಟಕದ ಪೊಲೀಸ್ ಇಲಾಖೆ ಅತೀ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರೂ ವಂಚನೆಗೆ ಬಲಿಯಾಗಿ ಹಣ ಕಳೆದುಕೊಂಡು ಸುದ್ದಿಯಾಗಿದ್ದರು.
ಈ ಬಗ್ಗೆ ಬ್ಯಾಂಕ್ ಗಳು ಜಾಗೃತಿ ಮೂಡಿಸಿದ ಪರಿಣಾಮ ಜನ ಜಾಗೃತರಾದರು. ವಂಚಕರು ಬೇರೆ ಹಾದಿ ಹಿಡಿದರು. ಉನ್ನತ ಅಧಿಕಾರಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ನೇರವಾಗಿ ಹಣಕ್ಕೆ ಬೇಡಿಕೆ ಇಡುವ ವ್ಯವಸ್ಥೆಯೂ ಇತ್ತು. ಇದು ಸಣ್ಣ- ಸಣ್ಣ ಮೊತ್ತದ ವ್ಯವಹಾರವಾಗಿತ್ತು. ಆದರೆ ಜನ ಬಹಳ ಬೇಗನೇ ಈ ಬಗ್ಗೆ ಜಾಗೃತರಾದರು.
ಕೊರೋನಾ ಸಂದರ್ಭದಲ್ಲಿ ಈ ವಂಚಕರು ಮತ್ತೊಂದು ದಾರಿ ಕಂಡು ಹಿಡಿದಿದ್ದರು. ಮೋಟಾರು ವಾಹನಗಳನ್ನು ಮಾರುವ ಸಲುವಾಗಿ ಯಾವುದೋ ದೂರದೂರಿನ ಅಡ್ರೆಸ್ ನಿಂದ ಅವುಗಳ ಡಿಟೈಲ್ ಕಳಿಸುತ್ತಿದ್ದರು. ಅದರ ನಿಜವಾದ ಬೆಲೆಗಿಂತಲೂ ಅದೆಷ್ಟೋ ಪಟ್ಟು ಕಡಿಮೆ ದರಕ್ಕೆ ನೀಡುವುದಾಗಿ ಹೇಳಿ ಅವರಿಂದ ಸಾಗಾಟ ವೆಚ್ಚಕೆಂದು ಮುಂಗಡ ಹಣ ಕೇಳುತ್ತಿದ್ದರು. ಒಮ್ಮೆ ಹಣ ನೀಡಿದರೆ ವಂಚನೆಗೆ ಬಲಿಯಾಗಿದ್ದಾನೆಂದು ಖಚಿತ ಪಡಿಸಿ ವಿವಿಧ ಕಾರಣಗಳನ್ನು ನೀಡಿ ಹಂತ ಹಂತವಾಗಿ ಹಣ ವಸೂಲಿ ಮಾಡುತ್ತಿದ್ದರು.
ಅಪಾಯಕಾರಿ ಲಿಂಕ್ ಕಳುಹಿಸಿ ಅದನ್ನು ಕ್ಲಿಕ್ ಮಾಡಲು ಹೇಳಿ, ಆ ಮೂಲಕ ನಮ್ಮ ದತ್ತಾಂಶ ಪಡೆದು ಹಣ ದೋಚುವುದು ಮತ್ತೊಂದು ಜಾಲ.
ಇನ್ನು ಹಣ ದುಪ್ಪಟ್ಟು ಮಾಡುವುದಾಗಿ ಜನರಿಂದ ಹಣ ಹೂಡಿಸಿ, ಯಾವುದೋ ಟಾಸ್ಕ್ ನೀಡಿ ಮೊದಲು ದುಪ್ಪಟ್ಟು ಹಣ ನೀಡಿ ಜನರ ನಂಬಿಕೆ ಗಳಿಸಿ, ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದಾಗ ಪರಾರಿಯಾಗುವ ತಂಡ ಮತ್ತೊಂದು.
ಇತ್ತೀಚೆಗೆ ಪಾರ್ಸೆಲ್‌ನಲ್ಲಿ ಮಾದಕ ವಸ್ತುಗಳಿವೆ, ನಾವು ಪೊಲೀಸರು ಕರೆ ಮಾಡುತ್ತಿದ್ದೇವೆ, ಇಂತಿಷ್ಟು ಹಣ ನೀಡಿದರೆ ಪ್ರಕರಣ ದಾಖಲಿಸುವುದಿಲ್ಲ ಎಂದ ಹೇಳಿ ಹಣ ದೋಚಿದ ತಂಡದ ಬಗ್ಗೆಯೂ ಸುದ್ದಿಯಾಗಿತ್ತು.
ಕೆಲ ದಿನಗಳ ಹಿಂದೆ ಶಾಲೆಗೆ ಹೋದ ಮಕ್ಕಳು ನಮ್ಮ ಕಸ್ಟಡಿಯಲ್ಲಿ ಇದ್ದಾರೆ ಬಿಡುಗಡೆಗೆ ಇಂತಿಷ್ಟು ಹಣ ನೀಡಿ ಎಂದು ಪೋಷಕರಿಗೆ ಕರೆ ಮಾಡಿದ ವಂಚನಾ ಜಾಲದ ಬಗ್ಗೆ ಯೂ ಸುದ್ದಿಯಾಗಿತ್ತು.
ಇವೆಲ್ಲಾ ಜಾಲಗಳು ಬಹಳಷ್ಟು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ. ಇದಕ್ಕೆ ನಮ್ಮ ಡೇಟಾಗಳನ್ನು ಯಾವುದೋ ಮೂರನೇ ತಂಡವೊಂದು ನೀಡುತ್ತದೆ. ಹಣವಿರುವ ಜನರ ಬಗ್ಗೆ ಅಧ್ಯಯನ ಮಾಡಿಯೇ ಇದು ಕಾರ್ಯಾಚರಿಸುತ್ತದೆ.
ನಿಮಗೂ ಇಂತಹ ಅನುಭವವಾದರೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ. ಏಕಾಏಕಿ ಹಣ ವರ್ಗಾವಣೆಗೆ ಮುಂದಾಗಬೇಡಿ. ಇಲ್ಲವೇ ನಿಮ್ಮ ಆಪ್ತರ ಬಳಿ ಹಂಚಿಕೊಂಡು ಸಲಹೆಪಡೆಯಿರಿ.
ಒಮ್ಮೆ ಹಣ ಕಳೆದುಕೊಂಡರೆ ಮತ್ತೆ ಪಡೆದು ಕೊಳ್ಳುವುದು ಕನಸಿನ ಮಾತು. ನಮ್ಮ ದೇಶದಲ್ಲಿ ಸೈಬರ್ ಕಾನೂನುಗಳು ಇನ್ನಷ್ಟು ಬಲಿಷ್ಠವಾಗುವ ತನಕ ಇಂತಹ ವಂಚನೆಗಳು ಮುಂದುವರಿಯುತ್ತಲೇ ಇರುತ್ತದೆ.

Social Icons