ಸಂಪಾದಕೀಯ | ಹ್ಯಾಕಿಂಗ್ ಯುಗದಲ್ಲಿ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಮತ್ತೊಂದು ಮಹಾ ಪ್ರಶ್ನೆ..!
ವಿದ್ಯುನ್ಮಾನ ಮತಯಂತ್ರದ ಬಗ್ಗೆ ಮತ್ತೊಂದು ಮಹಾ ಪ್ರಶ್ನೆ ಎದುರಾಗಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಹ್ಯಾಕ್ ಮಾಡಬಹುದು ಎಂದು ವಿಶ್ವದ ಅತಿ ಶ್ರೀಮಂತ ಹಾಗೂ ಟೆಸ್ಲಾ ಕಂಪೆನಿಯ ಮಾಲಕ ಇಲಾನ್ ಮಸ್ಕ್ ಹೇಳಿದ್ದು ವಿವಾದದ ಕಿಡಿ ಹೊತ್ತಿಸಿದೆ.
ಮಸ್ಕ್ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಉಂಟುಮಾಡಿದೆ. ಭಾರತ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಭದ್ರ ನೆಲೆ ಹೊಂದಿದ ರಾಷ್ಟ್ರ. ಇತ್ತೀಚಿಗಷ್ಟೆ ಮುಕ್ತಾಯವಾದ ಏಳು ಹಂತಗಳ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರಗಳ ಮೂಲಕ ನಮ್ಮನ್ನು ಆಳುವವರನ್ನು ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲೇ ಮಸ್ಕ್ ಹೇಳಿಕೆ ಹೊಸ ಅತಂಕ, ಅಕ್ರಮದ ಸಾಧ್ಯತೆ ಕುರಿತು ಗುಮಾನಿಗಳನ್ನು ಎಬ್ಬಿಸಿದೆ.
ಈಗಾಗಲೇ ನಾವು ಅಂದುಕೊಂಡಂತೆ, ನಮ್ಮ ದೇಶದಲ್ಲಿ ಬಳಕೆಯಾಗಿರುವ EVMಗಳು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ನೆಟ್‌ವರ್ಕ್ ಯಾ ಮಾಧ್ಯಮದ ಸಂಪರ್ಕ ಇಲ್ಲದೆ ಪ್ರತ್ಯೇಕ ಡಿವೈಸ್ ಆಗಿರುವ ಯಾಂತ್ರಿಕ ಸಾಧನ. ಇದರ ವಿನ್ಯಾಸ ಹೇಗಿದೆ ಎಂದರೆ ಈ ಮತಯಂತ್ರವನ್ನು ಬ್ಲೂಟೂತ್, ವೈ-ಫೈ ಸಂಪರ್ಕಕ್ಕೂ ಭೇದಿಸಲು ಸಾಧ್ಯವಾಗದು.
ಆದರೂ, ಚುನಾವಣೆಗೆ ಮುನ್ನ ಕಾಸರಗೋಡಿನಲ್ಲಿ ನಡೆದ ಅಣಕು ಮತದಾನದಲ್ಲಿ ಕಂಡುಬಂದ ಲೋಪಗಳು, ಸ್ವತಃ ಪ್ರಧಾನಿ ಮೋದಿ ಸ್ಪರ್ಧಿಸಿದ ವಾರಣಾಸಿಯಲ್ಲೇ ಮತಯಂತ್ರಗಳ ಬಗ್ಗೆ ಎದ್ದಿರುವ ಅನುಮಾನಗಳು, ವಾಯವ್ಯ ಮುಂಬೈ ಲೋಕಸಭಾ ಕ್ಷೇತ್ರದ ಮತ ಎಣಿಕೆ ವೇಳೆ ಹಲವು ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಯಾವುದರ ಬಗ್ಗೆ ಬೆರಳು ತೋರಿಸುತ್ತಿವೆ ಎಂಬುದನ್ನು ಹೇಳಲೇಬೇಕು.
ಇದು ಕೇವಲ ಆರೋಪಗಳು ಮಾತ್ರವಲ್ಲ... ಭಾರತೀಯ ಪ್ರಜಾತಂತ್ರದ ಮೇಲೆ ಜನತಾ ಜನಾರ್ಧನ ಇಟ್ಟಿರುವ ಅಪಾರವಾದ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ಮತ್ತು ಹೊಣೆಗಾರಿಕೆಯಿರುವ ವಿಷಯ.
ಒಬ್ಬಾತ ಏಳೆಂಟು ಬಾರಿ ಚುನಾವಣೆಯಲ್ಲಿ ಮತದಾನ ಮಾಡಿ ತನ್ನ ಮತದಾನದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, 140 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನದವಾದ ಸಂಖ್ಯೆಗೂ ಮತ ಎಣಿಕೆಯ ಸಂಖ್ಯೆಗೂ ತಾಳೆಯಾಗದಿರುವುದು, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರಗಳಲ್ಲಿ ಜಿಲ್ಲಾ ಮತ್ತು ಕೆಳ ಹಂತದ ಚುನಾವಣಾಧಿಕಾರಿಗಳ ಕರ್ತವ್ಯ ಲೋಪಗಳ ಆರೋಪಗಳು, ಸಿಸಿಟಿವಿ ಕ್ಯಾಮರಾಗಳ ಬಗ್ಗೆ ಮಾಹಿತಿ ನೀಡದ ಚುನಾವಣಾ ಆಯೋಗದ ಕ್ರಮಗಳು ಕೂಡ ಪಾರದರ್ಶಕ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆದಿದೆಯೇ ಎಂಬ ಬಗ್ಗೆ ಗುಮಾನಿಗಳು ಎದ್ದಿವೆ.
ಹಾಗೆ ನೋಡಿದರೆ, ಯಾವುದೇ ಯಂತ್ರವನ್ನಾದರೂ ಹ್ಯಾಕ್ ಮಾಡಬಹುದು ಎಂಬ ಎಲಾನ್ ಮಸ್ಕ್ ಹೇಳಿಕೆ ಬೀಡುಬೀಸಾಗಿ ಕೊಟ್ಟಿರುವ ಹೇಳಿಕೆಯೂ ಆಗಿರಬಹುದು. ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ತಂತ್ರಜ್ಞಾನ ಇದೆ. ಒಂದು ವೇಳೆ, ತಂತ್ರಜ್ಙಾನವೇ ಸಮಸ್ಯೆಯಾದಾಗ ಅದರ ಬಳಕೆಯನ್ನು ನಿಲ್ಲಿಸಬೇಕು.
ಈ ಬಾರಿಯ ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಪಾತ್ರದ ಬಗ್ಗೆಯೂ ವ್ಯಾಪಕ ಟೀಕೆಗಳು ಕೇಳಿಬಂದಿದೆ. ಇಂತಹ ಸಂಸ್ಥೆಗಳಲ್ಲಿ ಉತ್ತರದಾಯಿತ್ವದ ಕೊರತೆ ಇದ್ದಾಗ ಪ್ರಜಾಪ್ರಭುತ್ವದ ವ್ಯವಸ್ಥೆ ಕಪಟ ಎಂದಾಗಬಾರದು. ವಂಚನೆಗೆ ಇಲ್ಲಿ ಅವಕಾಶ ನೀಡಬಾರದು.
ನಮ್ಮ ವ್ಯವಸ್ಥೆ ಇಂತಹ ಅನುಮಾನಗಳಿಗೆ ಉತ್ತರ ನೀಡಬೇಕು. ಕೇವಲ ಉತ್ತರ ಮಾತ್ರವಲ್ಲ.. ಒಂದು ರೀತಿಯ ಸಾಲಿಡ್ ಪ್ರೂಫ್ ನ್ನು ಜನತೆ ಮುಂದಿಡಬೇಕು. ಇಲ್ಲದಿದ್ದರೆ ನಾವೆಲ್ಲ ಕಪಟ ವ್ಯವಸ್ಥೆಯ ಭಾಗವಾಗಿ ಹೋಗುತ್ತೇವೆ.
Social Icons