ಸಂಪಾದಕೀಯ | ಮತಪ್ರಭುಗಳು... ಜನಪ್ರತಿನಿಧಿಗಳ ದುರಂಹಕಾರಗಳು... ನಾವೆತ್ತ ಸಾಗಿದ್ದೇವೆ..?
ರಾಜಕಾರಣ ಒಂದು ಸಮಾಜಸೇವೆ ಅನ್ನೋ ದಿನಗಳು ಈಗ ಹೋಗಿವೆ. ಪಾಲಿಟಿಕ್ಸ್ ಎನ್ನುವುದು ಉದ್ಯಮದ ಒಂದು ಭಾಗವಾಗಿದೆ. ವ್ಯವಹಾರದ ಜಗತ್ತಿನಲ್ಲಿ ಚುನಾವಣೆಗಳು, ಎಕ್ಸಿಟ್ ಪೋಲ್‌ಗಳು ಉದ್ಯಮದ ಒಂದು ಭಾಗವಾಗಿಯೇ ಹೋಗಿದೆ.
ಭಾರತ ಪ್ರಜಾಪ್ರಭುತ್ವದ ಮಾತೆ (Mother of Democracy) ಎಂಬುದಾಗಿ ನಾವೆಲ್ಲರೂ ನಂಬಿದ್ದೇವೆ. ಪ್ರಪಂಚದ ಅತಿ ದೊಡ್ಡ ಪ್ರಜಾತಂತ್ರ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ. ಆದರೂ, ಈ ಬಾರಿಯ ಚುನಾವಣಾ ಪ್ರಕ್ರಿಯೆಯ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿವೆ. ಮೊದಲ ಬಾರಿಗೆ ಅತ್ಯಂತ ಕಳಪೆ ಎಕ್ಸಿಟ್ ಪೋಲ್‌ಗಳನ್ನು ನಾವು ಕಂಡಿದ್ದೇವೆ. 10ರಲ್ಲಿ 10 ಎಕ್ಸಿಟ್ ಪೋಲ್‌ಗಳು ವಾಸ್ತವಕ್ಕೆ ದೂರ ಇದ್ದು, ಇದೊಂದು ಶೇರು ಮಾರ್ಕೆಟ್ ಗಿಮಿಕ್ ಎಂಬ ಆತಂಕ ಎಲ್ಲರಲ್ಲೂ ಇದೆ.
ಮತದಾನ ಮುಗಿದ ನಂತರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ಶೇರು ಮಾರುಕಟ್ಟೆ ಮತ್ತೆ ಪುಟಿದೇಳಲಿದೆ ಎಂದು ಹೇಳುವ ಮೂಲಕ ಹೂಡಿಕೆಗೆ ಸಂದೇಶ ನೀಡಿದರು. ಇದನ್ನು ನಂಬಿದ ಸಣ್ಣ ಹೂಡಿಕೆದಾರರಿಗೆ ಫಲಿತಾಂಶದ ಬಳಿಕ ಆದ ನಷ್ಟಕ್ಕೆ ಯಾರು ಹೊಣೆ..? ಇದೊಂದು ದೊಡ್ಡ ಹಗರಣ ಎಂಬ ಶಂಕೆ ಎದುರಾಗಿದ್ದು, ಪ್ರತಿಪಕ್ಷಗಳು ಈ ವಿಷಯವನ್ನೂ ಸಂಸತ್ತಿನಲ್ಲಿ ಎತ್ತುವ ಸಾಧ್ಯತೆ ಇದೆ.
ಇದರ ಜೊತೆಗೆ 24 ಲಕ್ಷ ವಿದ್ಯಾರ್ಥಿಗಳು ಬರೆದಿದ್ದ ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಕೇಂದ್ರ ಸರ್ಕಾರ ಮೌನದಿಂದ ಇದೆ. ಪ್ರಧಾನಿಯಂತೂ ತುಟಿ ಬಿಚ್ಚಿಲ್ಲ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಕ್ರಮ ನಡೆದಿರುವುದನ್ನು ಒಪ್ಪಿದ್ದರೂ ಸಮಗ್ರ ತನಿಖೆಗೆ ಮುಂದಾಗಿಲ್ಲ.
ಇದರ ಬೆನ್ನಲ್ಲೇ ದೇಶದ ಮೂರನೇ ಅತಿ ದೊಡ್ಡ ಸೇತುವೆ ಎಂಬ ಹೆಗ್ಗಳಿಕೆಯ ಪ್ರತೀಕವಾದ ಅಟಲ್ ಸೇತುಯ Approach ರಸ್ತೆಯಲ್ಲಿ ಬಿರುಕು ಕಂಡುಬಂದಿದೆ. 18000 ಕೋಟಿ ರೂ. ಮೊತ್ತದ ಈ ಬೃಹತ್ ಕಾಮಗಾರಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕಳೆದ ವಾರದಲ್ಲಿ ನಡೆದ ಕಾಂಚನಜುಂಗಾ ರೈಲು ಅಪಘಾತದ ಸಹಿತ ನಿರಂತರವಾಗಿ ನಡೆಯುತ್ತಿರುವ ರೈಲು ಅಪಘಾತಗಳ ಬಗ್ಗೆ ರೈಲ್ವೇ ಸಚಿವಾಲಯ ಗಂಭೀರವಾಗಿ ಪರಿಗಣಿಸಿಲ್ಲ.
ಇದೆಲ್ಲ ಏನು ತೋರಿಸುತ್ತದೆ...? ರಾಜಕಾರಣಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜವಾಬ್ದಾರಿಗಳು, ಬದುಕಿನ ಅರ್ಥಗಳು, ಸೂಕ್ಷ್ಮತೆಗಳನ್ನು ಮರೆತು ಬಿಟ್ಟಿದ್ದಾರೆ ಎಂಬ ಅನುಮಾನಗಳು ಏಳುತ್ತಿಲ್ಲವೇ..?
ದಶಕಗಳ ಹಿಂದೆ, ವಿಮಾನ ದುರಂತ ಸಂಭವಿಸಿದ್ದ ಸಂದರ್ಭದಲ್ಲಿ ಆಗಿನ ವಿಮಾನಯಾನ ಸಚಿವ ಮಾಧವ ರಾವ್ ಸಿಂಧಿಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಹಲವಾರು ಘಟನೆಗಳಲ್ಲಿ ಆಯಾ ಸಚಿವಾಲಯದ ಹೊಣೆ ಹೊತ್ತ ಸಚಿವರು ತಮ್ಮ ಇಲಾಖೆಯಲ್ಲಿನ ಲೋಪಗಳಿಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ಪರಿಪಾಠ ಇತ್ತು. ಇದೆಲ್ಲ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿವೆ.
ಸಚಿವಾಲಯದಲ್ಲಿ ನಡೆಯುತ್ತಿರುವ ವಿದ್ಯಮಾನಕ್ಕೂ ತಮಗೂ ಏನೂ ಸಂಬಂಧವೇ ಇಲ್ಲ ಎಂಬಂತೆ ಸಚಿವರು ವರ್ತಿಸುತ್ತಿದ್ದರು. ನೀಟ್ ಅಕ್ರಮವಾಗಲೀ, ರೈಲು ದುರಂತಗಳಾಗಲೀ ಆಯಾ ಇಲಾಖೆಯ ಸಚಿವರನ್ನು ಬಾಧಿಸಿಯೇ ಇಲ್ಲ.
ಜನರು ರಾಜಕಾರಣಿಗಳ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವುದು, ಜನರಿಗೆ ಹಿತವಾದ ಆಡಳಿತ ನೀಡುವುದು ಪ್ರಭುತ್ವದ ಕರ್ತವ್ಯ. ಅದಕ್ಕಾಗಿಯೇ ಚುನಾವಣೆಯಲ್ಲಿ ಮತಪ್ರಭುಗಳು ಮತದಾನ ಮಾಡಿ ಆಳುವವರನ್ನು ಆಯ್ಕೆ ಮಾಡುತ್ತಾರೆ. ಆದರೆ ದುರದೃಷ್ಟವಶಾತ್ ಜನರಿಂದ ಆಯ್ಕೆಯಾದ ಬಳಿಕ ಜನರ ಜೊತೆಗಿನ ಕೊಂಡಿಯನ್ನೇ ಜನಪ್ರತಿನಿಧಿ ಕಡಿದುಕೊಳ್ಳುತ್ತಾರೆ. ಇದು ಪ್ರಜಾಪ್ರಭುತ್ವದ ದುರಂತವಲ್ಲದೆ ಇನ್ನೇನು..?
Social Icons