ಸಂಪಾದಕೀಯ | ಮೋದಿ 3.0: ಹೊಸ ಅಧ್ಯಾಯದ ಆರಂಭ- ಸವಾಲುಗಳು, ಅವಕಾಶಗಳು

ಸಂಪಾದಕೀಯ | ಮೋದಿ 3.0: ಹೊಸ ಅಧ್ಯಾಯದ ಆರಂಭ- ಸವಾಲುಗಳು, ಅವಕಾಶಗಳು


ಮೊದಲ ಸಂಪಾದಕೀಯವನ್ನು ಓದುಗರ ಮುಂದಿಡುವ ಮುನ್ನ....


ಯುವ ಉತ್ಸಾಹಿ ಪತ್ರಕರ್ತರ ತಂಡದ ನೇತೃತ್ವದಲ್ಲಿ ಇದೇ ಮೊದಲ ವಿನೂತನ ಪ್ರಯತ್ನ ಎಂಬಂತೆ ಕನ್ನಡ ಅಲರ್ಟ್‌ ಎಂಬ ಸುದ್ದಿ ವಾಹಿನಿಯನ್ನು ನಿಮ್ಮ ಮಡಿಲಿಗೆ ಅರ್ಪಿಸುತ್ತಿದ್ದೇವೆ. ಕರ್ನಾಟಕದ ಮೂಲೆ ಮೂಲೆಯ ಸುದ್ದಿಗಳನ್ನು ಓದುಗರ ಮುಂದೆ ಇಡುವುದು ಒಂದು ಕಷ್ಟದ ಕೆಲಸ. ಬೃಹತ್ ಸುದ್ದಿ ಲೋಕದಲ್ಲಿ ಇದೇ ಮೊದಲ ಪುಟ್ಟ ಹೆಜ್ಜೆ ಇಡುವ ನಮಗೆ "ಪ್ರವಾಹದ ವಿರುದ್ಧ ಈಜು" ಒಂದು ಸವಾಲೇ ಸರಿ. 


ಪಾರದರ್ಶಕವಾಗಿ, ವಸ್ತುನಿಷ್ಟವಾಗಿ ಯಾವುದೇ ಅಂಜಿಕೆ ಅಳುಕು ಇಲ್ಲದೆ ನಿಮ್ಮೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತೇವೆ ಎಂಬ ಭರವಸೆ ನಮ್ಮದು. ಜನಪರ ಮಾಧ್ಯಮ ಲೋಕದಲ್ಲಿ ನಮ್ಮ ಕರ್ತವ್ಯವನ್ನು  ನಿಷ್ಠೆಯಿಂದ, ಆತ್ಮ ಸಮರ್ಪಣ ಭಾವದಿಂದ ನಿರ್ವಹಿಸುತ್ತೇವೆ. ನಮ್ಮ ಬಳಗಕ್ಕೆ ನಿಮ್ಮ ಬೆಂಬಲ ಸದಾ ನಮ್ಮ ಮೇಲೆ ಇರಲಿ ಎಂದು ನಿಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತಾ ನಮ್ಮ ಮೊದಲ ಸಂಪಾದಕೀಯವನ್ನು ಈ ಮೂಲಕ ಓದುಗರ ಮುಂದೆ ತೆರೆದಿಡುತ್ತಿದ್ದೇವೆ. (ಸಂಪಾದಕರು)





ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಮೂರನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಬಳಿಕ ಸತತ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ ದಾಖಲೆ ನರೇಂದ್ರ ಮೋದಿಯವರದ್ದು. ಈ ಬಾರಿ ನೂತನ ಮಂತ್ರಿಮಂಡಲದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ನರೇಂದ್ರ ಮೋದಿ ಅವರಿಗೆ ಹೊಸ ಸವಾಲುಗಳು, ಅವಕಾಶಗಳು ಮತ್ತು ಸಾಧ್ಯತೆಗಳನ್ನು ತೆರೆದಿಟ್ಟಿದೆ.


ಅದೇ ರೀತಿ, ಪ್ರತಿಪಕ್ಷಗಳಿಗೂ ಒಂದು ಸವಾಲು ಎದುರಾಗಿದೆ. ಮೂರನೇ ಬಾರಿಗೆ ತನ್ನ ತಂಡವನ್ನು ಗಟ್ಟಿಯಾಗಿಯೇ ಮುಂದಿಟ್ಟುಕೊಂಡು ಬಂದಿದೆ. ಕಳೆದ ಎರಡೂ ಅವಧಿಯಲ್ಲಿ ಸಂಖ್ಯಾಬಲದ ಲೆಕ್ಕದಲ್ಲಿ ಅಧಿಕೃತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಮೋದಿ ಮುಂದೆ ಗಟ್ಟಿ ಧ್ವನಿಯಲ್ಲಿ ತೊಡೆ ತಟ್ಟಲಿದೆ.


ಸಂಸತ್ತಿನಲ್ಲಿ "ಏಕ್ ಅಕೇಲಾ ಮೋದಿ ಸಬ್‌ ಪರ್ ಭಾರಿ" ಎಂದು ಎದೆತಟ್ಟಿದ್ದ ಮೋದಿ ತನ್ನ ಹೆಸರಿನ ಬಲದಿಂದಲೇ ಚುನಾವಣೆಯನ್ನು ಎದುರಿಸಿದ್ದರು. "ಅಬ್ ಕೀ ಬಾರ್ ಚಾರ್‌ಸೋ ಪಾರ್" ಎಂಬ ಘೋಷ ವಾಕ್ಯ ಚುನಾವಣಾ ಪ್ರಚಾರಕ್ಕೆ ಹೊಸ ಮೆರುಗನ್ನೂ ನೀಡಿತ್ತು.


ಏಳು ಹಂತಗಳ ಚುನಾವಣಾ ಪ್ರಕ್ರಿಯೆಯಲ್ಲಿ ನರೇಂದ್ರ ಮೋದಿ ಅವರು ತಮ್ಮ ಸಾಧನೆಯ ಬಗ್ಗೆ ಏನನ್ನೂ ಮಾತನಾಡದಿದ್ದರೂ ಮುಸ್ಲಿಂ, ಮಾಂಗಲ್ಯ, ಮೀನು, ಮಜ್ರಾ, ಬಾಬ್ರಿವಾಲಾ ತಾಲಾ ಮೊದಲಾದ ವಿಷಯಗಳನ್ನು ಮುಂದಿಟ್ಟು ದ್ವೇಷ ಭಾಷಣಗಳಿಂದಲೇ ಎದುರಾಳಿಗನ್ನು ಹಣಿದರು. 'ರಾಮ ಮಂದಿರ' ಈ ಬಾರಿ ಚುನಾವಣಾ ವಿಷಯವಾಗಿ ದೊಡ್ಡ ಸದ್ದು ಮಾಡಲಿಲ್ಲ. ಅದಕ್ಕೆ ಬದಲಾಗಿ, ಚುನಾವಣಾ ಬಾಂಡ್, ನಿರುದ್ಯೋಗ, ಬೆಲೆ ಏರಿಕೆ ವಿಷಯಗಳು ಮತದಾರನಿಗೆ ಮುಖಾಮುಖಿಯಾಯಿತು. ಹಿಂದುತ್ವ, ಮೋದಿ ಬ್ರ್ಯಾಂಡ್‌ ಬಿಜೆಪಿ ಪರ ಕೆಲಸ ಮಾಡಿದವು.


ಕಾಂಗ್ರೆಸ್ ಇದೇ ಮೊದಲ ಬಾರಿ ವಿಷಮ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಿತ್ತು. ತನ್ನ ಎಲ್ಲ ಬ್ಯಾಂಕ್‌ ಖಾತೆಗಳು ಸ್ತಂಬನಗೊಂಡರೂ, ಅರ್ಧಕ್ಕಿಂತಲೂ ಅಧಿಕ ನಾಯಕರನ್ನು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ತನ್ನ ಬುಟ್ಟಿಗೆ ಹಾಕಿಕೊಂಡರೂ ಎದೆಗುಂದದ ಕಾಂಗ್ರೆಸ್ ತನ್ನ ಆಯ್ದ ಕೆಲ ನಾಯಕರ ಬಲದಿಂದಲೇ ಚುನಾವಣೆ ಎದುರಿಸಿತ್ತು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಗಾಂಧಿ ದೇಶದೆಲ್ಲೆಡೆ ಮೋದಿ ವಿರುದ್ಧ ಭಾಷಣಗಳ ಮೂಲಕ ಸದ್ದು ಮಾಡಿದರು.


ಇನ್ನೊಂದೆಡೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್, ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್, ಮಹಾರಾಷ್ಟ್ರದಲ್ಲಿ ಉದ್ಧವ್ ಠಾಣೆ-ಶರದ್ ಪವಾರ್, ಬಿಹಾರದಲ್ಲಿ ತೇಜಸ್ವಿ ಯಾದವ್, ಮತ್ತು ದೆಹಲಿ-ಪಂಜಾಬ್‌ನಲ್ಲಿ ಅರವಿಂದ ಕೇಜ್ರೀವಾಲ್ ಬಿಜೆಪಿಯನ್ನು ಕಟ್ಟಿಹಾಕಲು ಶತಪ್ರಯತ್ನ ಮಾಡಿದ್ದರು.


ಒಂದು ವೇಳೆ, ಒರಿಸ್ಸಾ, ಬಿಹಾರ ಮತ್ತು ಆಂಧ್ರ ಪ್ರದೇಶ ಕೈಕೊಟ್ಟಿದ್ದರೆ ನರೇಂದ್ರ ಮೋದಿ ಯುಗಾಂತ್ಯವಾಗುವ ಸಾಧ್ಯತೆಯೂ ಇತ್ತು. ಆದರೆ, ಪ್ರಜ್ಞಾವಂತ ಮತದಾರ ತನ್ನ ಎಲ್ಲ ಕೆಲಸಗಳನ್ನು ಜಾಣ್ಮೆಯಿಂದಲೇ ಮಾಡಿದ್ದಾರೆ. ಬಲಾಢ್ಯ ಆಡಳಿತ ಪಕ್ಷಕ್ಕೆ ಬುದ್ದಿ ಕಲಿಸುತ್ತಲೇ ಪ್ರತಿಪಕ್ಷಕ್ಕೆ ಬಲವನ್ನು ತುಂಬಿ ಪ್ರಜಾತಂತ್ರದ ತಕ್ಕಡಿಯಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದಾನೆ.


ದುರಹಂಕಾರ ಮತ್ತು ಮದದಿಂದ ವರ್ತಿಸುತ್ತಿದ್ದ ರಾಜಕಾರಣಿಗಳಿಗೆ ಬ್ರೇಕ್ ಹಾಕಿರುವ ಮತದಾರ, ದ್ವೇಷ ಭಾಷಣ ಮತ್ತು ಪ್ರೀತಿ ಹಂಚುವವರಲ್ಲಿ ಯಾರು ಬೇಕು ಎಂಬ ತೀರ್ಮಾನವನ್ನೂ ಮಾಡಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಈ ಚುನಾವಣೆ ಒಂದು ಐತಿಹಾಸಿಕ ಮೈಲುಗಲ್ಲು.


ಎನ್‌ಡಿಎ ಪಾಲು ಪಕ್ಷಗಳ ಪ್ರಭಾವಿ ನಾಯಕರನ್ನು ಒಳಗೊಂಡ ಹೊಸ ಬಳಗದೊಂದಿಗೆ ನರೇಂದ್ರ ಮೋದಿ ಸಂಸತ್ತಿಗೆ ಪ್ರವೇಶಿಸಿದ್ದಾರೆ. ಐದು ವರ್ಷಗಳ ತನಕ ಉತ್ತಮ ಆಡಳಿತ ನೀಡುತ್ತಾ ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿ. ನಾಡಿನ ಅಭಿವೃದ್ಧಿಯಲ್ಲಿ ಹೊಸ ಶಖೆ ಆರಂಭವಾಗಿ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿ ತುಂಬಲಿ ಎಂಬುದು ನಮ್ಮೆಲ್ಲರ ಹಾರೈಕೆ...