ಕಾರ್ಕಳ: ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬೈಕ್ - ನವವಿವಾಹಿತೆ ಸಾವು



ಕಾರ್ಕಳ: ಸಂಚರಿಸುತ್ತಿದ್ದ ಬೈಕೊಂದಕ್ಕೆ ಶ್ವಾನವೊಂದು ಅಡ್ಡ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿದ ಬೈಕ್ ಪಲ್ಟಿ ಹೊಡೆದ ಪರಿಣಾಮ ನವವಿವಾಹಿತೆ ರಸ್ತೆಗೆಸೆಯಲ್ಪಟ್ಟು ಪ್ರಾಣ ಕಳೆದುಕೊಂಡ ಘಟನೆ ಕಾರ್ಕಳ ತಾಲೂಕಿನ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ಸಂಭವಿಸಿದೆ.

ಕಾರ್ಕಳ ತಾಲೂಕಿನ ಕಾರ್ಕಳ ಕಸ್ಬಾ ಗ್ರಾಮದ ತೆಳ್ಳಾರು ನಿವಾಸಿ ನಿಕ್ಷಾ ಮೃತಪಟ್ಟ ನವವಿವಾಹಿತೆ. ಎರಡು ತಿಂಗಳ ಹಿಂದೆಯಷ್ಟೇ ಕಾರ್ಕಳ ಹೊಸ್ಮಾರು ನಿವಾಸಿ ವಿಶಾಲ್ ಎಂಬವರೊಂದಿಗೆ ಇವರ ವಿವಾಹವಾಗಿತ್ತು.

ನಿಕ್ಷ ತನ್ನ ಪತಿಯೊಂದಿಗೆ ಶುಕ್ರವಾರ ಮಧ್ಯಾಹ್ನ ಮಂಗಳೂರಿಗೆ ಹೊರಟಿದ್ದರು. ಹೊಸ್ಮಾರು, ಶಿರ್ತಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುವ ಖಾಸಗಿ ಬಸ್ಸು ಹತ್ತಲೆಂದು ಪತಿಯೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ಹೋಗಬೇಕಾಗಿದ್ದ ಬಸ್ ಈದು ಕ್ರಾಸ್ ಬಳಿಯಿಂದ ಹೊರಟಿತ್ತು. ಆದ್ದರಿಂದ ಹೊಸ್ಮಾರು ಜಂಕ್ಷನ್‌ನಲ್ಲಿ ಬಸ್ಸು ಹತ್ತಲು ಬೈಕ್‌ನಲ್ಲಿ ಬಂದಿದ್ದಾರೆ.

ಬಸ್ ಗಾಗಿ ವೇಗವಾಗಿ ಬರುತ್ತಿದ್ದಾಗ ಹೊಸ್ಮಾರು ಸೇತುವೆ ಸಮೀಪ ಸ್ಮಶಾನದ ಬಳಿ ನಾಯಿಯೊಂದು ಏಕಾಏಕಿ ರಸ್ತೆಗಡ್ಡವಾಗಿ ಬಂದಿದೆ. ಅನಿರೀಕ್ಷಿತವಾಗಿ ಬಂದ ನಾಯಿಯನ್ನು ತಪ್ಪಿಸಲು ವೇಗವಾಗಿ ಬರುತ್ತಿದ್ದ ಬೈಕ್‌ ಅನ್ನು ಹಠಾತ್ ನಿಲ್ಲಿಸಲು ವಿಶಾಲ್ ಅವರು ಯತ್ನಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆಯ ಒಂದು ಬದಿಗೆ ಮಗುಚಿ ಬಿದ್ದಿದೆ. ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ನಿಕ್ಷಾ ರಸ್ತೆಗೆ ಬಿದ್ದು ಅವರ ತಲೆಯ ಭಾಗಕ್ಕೆ ಬಲವಾದ ಏಟಾಗಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.