ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ಕನ್ನಡ ಸಿನಿಮಾರಂಗದಿಂದಲೇ ಬ್ಯಾನ್ ಮಾಡಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿ ಬರುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್. ಎಂ. ಸುರೇಶ್ ಅವರು, ದರ್ಶನ್ ಮೇಲಿನ ಆರೋಪ ಸಾಬೀತಾದಲ್ಲಿ ಮಾತ್ರ ನಿಷೇಧ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಈ ಕುರಿತು ಮಾತನಾಡಿದ ಸುರೇಶ್, ದರ್ಶನ್ ಅವರ ಒಂದು ಸಿನಿಮಾ ಅರ್ಧಕ್ಕೆ ನಿಂತಿದೆ. ಐದಾರು ತಿಂಗಳು ದರ್ಶನ್ ಈ ಪ್ರಕರಣದಿಂದ ಹೊರಬರಲು ಸಾಧ್ಯವಿಲ್ಲ. ಮುಂದೆ ಸಿನಿಮಾಗಳೂ ಘೋಷಣೆಯಾಗಿದೆ. ಕೆಲವರು ಅಡ್ವಾನ್ಸ್ ನೀಡಿದ್ದಾರೆ. ಹೀಗಾಗಿ ಬ್ಯಾನ್ ಅಷ್ಟೊಂದು ಸುಲಭವಲ್ಲ. ಮುಂದಿನ ನಾಲೈದು ದಿನಗಳಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಈ ಕೃತ್ಯವನ್ನು ಎಲ್ಲರೂ ಖಂಡಿಸಬೇಕಿದೆ. ದರ್ಶನ್ ಚಿತ್ರರಂಗದ ಮೇರುನಟರಾಗಿದ್ದು, ನಾವೆಲ್ಲರೂ ಮೊದಲು ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಬೇಕಿದೆ. ಕಾನೂನು ಪ್ರಕಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಆದರೆ ಅವರನ್ನು ತಕ್ಷಣಕ್ಕೆ ಬ್ಯಾನ್ ಮಾಡಲು ಆಗುವುದಿಲ್ಲ. ಬ್ಯಾನ್ ಮಾಡಲು, ಕಲಾವಿದರ ಸಂಘ ಹಾಗೂ ಇತರ ಅಂಗ ಸಂಸ್ಥೆಗಳ ಜೊತೆ ಸಭೆ ನಡೆಸಬೇಕು ಎಂದರು.
ಈ ಪ್ರಕರಣದ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಕೊಲೆ ಪ್ರಕರಣ ಇದ್ದಾಗ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. 2011ರಲ್ಲಿ ಅವರ ದಾಂಪತ್ಯ ಕಲಹವಾದಾಗ ನಾವು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಮಾತನಾಡಿಸಿ ಇಬ್ಬರ ನಡುವಿನ ಸಂಬಂಧವನ್ನು ಸರಿ ಮಾಡಿದ್ದೆವು. ಅದು ಕುಟುಂಬದ ವಿಚಾರವಾಗಿತ್ತು. ಈಗ ನಾವು ಎಂಟ್ರಿಯಾಗಲು ಸಾಧ್ಯವಿಲ್ಲ. ಕಾನೂನಿನ ತೀರ್ಪು ಬಂದಾಗ ಕೂಡಲೇ ತೀರ್ಮಾನ ತೆಗೆದುಕೊಳ್ಳುತ್ತೇವೆ. ಎಂದು ತಿಳಿಸಿದ್ದಾರೆ.

Social Icons