ರಾಜ್ಯದ ಖಾಸಗಿ ಆಸ್ಪತ್ರೆಗಳು ತಮ್ಮ ಕ್ಲಿನಿಕ್ ಅಥವಾ ಆಸ್ಪತ್ರೆಯ ಮುಂಭಾಗದಲ್ಲಿ ಸ್ಪಷ್ಟವಾಗಿ ಕಾಣುವಂತೆ ತಮ್ಮ ವೈದ್ಯಪದ್ಧತಿ ಅಲೋಪತಿಯೋ, ಆಯುರ್ವೇದವೋ ಎಂಬುದನ್ನು ಸ್ಪಷ್ಟವಾಗಿ ಸೂಚಿಸುವಂತಹ ನೋಂದಣಿ ಫಲಕವನ್ನು ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತ ಡಿ ರಣದೀಪ್ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯಾದ್ಯಂತ ಮನೆಮದ್ದು, ಹಿಪ್ನೊಥೆರಪಿ, ಬಾಡಿ ಮಸಾಜ್ ಮತ್ತು ಸಾಂಪ್ರದಾಯಿಕ ಔಷಧದಂತಹ ಚಿಕಿತ್ಸೆಗಳನ್ನು ನೀಡುವ ಅನಧಿಕೃತ ಸಂಸ್ಥೆಗಳಿವೆ. ಅವುಗಳನ್ನು ವೈದ್ಯಕೀಯ ಚಿಕಿತ್ಸೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಇವುಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತ್ತು ನಕಲಿ ವೈದ್ಯರ ಹಾವಳಿ ತಡೆಗಟ್ಟಲು ಈ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರಡಿಸಿರುವ ಆದೇಶದ ಪ್ರಕಾರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳು, ವೈದ್ಯರು ಮತ್ತು ಕ್ಲಿನಿಕ್‍ಗಳು ಸಾರ್ವಜನಿಕರಿಗೆ ಎದ್ದು ಕಾಣುವ ರೀತಿಯಲ್ಲಿ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ.
ಅಲೋಪತಿ ವೈದ್ಯರು ಆಕಾಶ ನೀಲಿ ಬಣ್ಣದ ನಾಮಫಲಕ, ಆಯುರ್ವೇದ ವೈದ್ಯರಿಗೆ ಹಸಿರು ಬಣ್ಣದ ನಾಮಫಲಕ ಅಳವಡಿಸಬೇಕು. ಫಲಕದಲ್ಲಿ ಆಸ್ಪತ್ರೆಯ ಹೆಸರು, ಮಾಲೀಕರ ಹೆಸರು ಮತ್ತು ಇತರ ವಿವರಗಳು ನೋಂದಣಿ ಸಂಖ್ಯೆಯ ಜೊತೆಗೆ ನಮೂದಿಸಬೇಕು. ಬೋರ್ಡ್ 7 ಅಡಿ ಅಗಲ ಮತ್ತು ಕನಿಷ್ಠ 3 ಅಡಿ ಎತ್ತರ ಇರಬೇಕು, ಅದರ ಮೇಲೆ ಎಲ್ಲಾ ಮಾಹಿತಿಯನ್ನು ಕಪ್ಪು ಬಣ್ಣದಲ್ಲಿ ಮುದ್ರಿಸಬೇಕು. ಕೆಪಿಎಂಇ ನೋಂದಣಿ ಸಂಖ್ಯೆಯು 120 ಸೆಂ.ಮೀ. ಅಗಲ ಮತ್ತು 20 ಸೆಂ.ಮೀ ಎತ್ತರವಾಗಿರಬೇಕು, ಆದರೆ ಕ್ಲಿನಿಕ್ ಅಥವಾ ವೈದ್ಯರ ಹೆಸರು ಕನಿಷ್ಠ 180 ಸೆಂ.ಮೀ ಅಗಲ ಮತ್ತು 20 ಸೆಂ.ಮೀ ಎತ್ತರ ಮತ್ತು ಮಾಲಕರ ಹೆಸರು 120 ಸೆಂ.ಮೀ ಅಗಲ ಮತ್ತು 15 ಸೆಂ.ಮೀ ಎತ್ತರವಾಗಿರಬೇಕು. ಈ ಎಲ್ಲಾ ವಿವರಗಳು ಕೆಪಿಎಂಇ ನೋಂದಣಿ ಪ್ರಮಾಣಪತ್ರದ ಪ್ರಕಾರ ಇರಬೇಕು.
ಜುಲೈ 31ರೊಳಗೆ ಈ ಫಲಕ ಅಳವಡಿಸಲು ಗಡುವು ನೀಡಲಾಗಿದೆ. ನಿಗದಿತ ಗಡುವಿನೊಳಗೆ ನಾಮಫಲಕ ಅಳವಡಿಸಲು ವಿಫಲರಾದಲ್ಲಿ ವೈದ್ಯರು ಮತ್ತು ಚಿಕಿತ್ಸಾಲಯದ ವಿರುದ್ಧ ಕೆಪಿಎಂಇ ತಿದ್ದುಪಡಿ ಕಾಯಿದೆ, 2017 ರ ಸೆಕ್ಷನ್ 19(5) ಅಡಿಯಲ್ಲಿ ಶಾಸನಬದ್ಧ ಕ್ರಮವನ್ನು ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಕ್ರಮದಿಂದ ಮಾನ್ಯತೆ, ಅರ್ಹತೆ ಪಡೆದಿರುವ ಜೊತೆಗೆ ಅರ್ಹತೆ ಇಲ್ಲದ ಹಾಗೂ ನಕಲಿ ವೈದ್ಯರನ್ನು ಪತ್ತೆ ಹಚ್ಚಲು ಸುಲಭ ಸಾಧ್ಯವಾಗುತ್ತದೆ ತಿಳಿಸಲಾಗಿದೆ.

Social Icons