ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸತ್ ಸದಸ್ಯರಾಗಿ ಕ್ಯಾ.ಬ್ರಿಜೇಶ್ ಚೌಟ ಅವರು ಸೋಮವಾರ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಕನ್ನಡದಲ್ಲಿ ಮಾಡಿದ ಪ್ರಮಾಣವಚನ ಮಾಡಿದ ಅವರು ತುಳುನಾಡಿನ ದೈವ ದೇವರನ್ನು ಸ್ಮರಿಸಿದ್ದು ವಿಶೇಷವಾಗಿತ್ತು. ಕೊನೆಗೆ ತುಳುಭಾಷೆಯಲ್ಲಿ ಧನ್ಯವಾದ ಸಮರ್ಪಿಸಿದರು.
ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಸೋಮವಾರ ಸಂಸತ್ತಿನ ಅಧಿವೇಶನದಲ್ಲಿ ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಪ್ರಮಾಣ ವಚನದ ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದ ಬ್ರಿಜೇಶ್ ಚೌಟ ಬಿಳಿ ಅಂಗಿ ಮತ್ತು ಬಿಳಿ ಲುಂಗಿ ಧರಿಸಿ ತುಳುನಾಡಿನ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು. ಕತ್ತಿಗೆ ಕೇಸರಿ ಶಾಲನ್ನು ಧರಿಸಿದ್ದರು.
“ನಾನು ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆಯ ಸದಸ್ಯನಾಗಿ ಚುನಾಯಿತನಾದವನಾಗಿ ಕಾನೂನಿನ ಮೂಲಕ ಸ್ಥಾಪಿತವಾದ ಭಾರತದ ಸಂವಿಧಾನದ ವಿಷಯದಲ್ಲಿ ನಿಜವಾದ ಶ್ರದ್ದೆ ಮತ್ತು ನಿಷ್ಠೆಯನ್ನು ಹೊಂದಿರುತ್ತೇನೆಂದೂ, ಭಾರತದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಎತ್ತಿಹಿಡಿಯುತ್ತೇನೆಂದೂ ಮತ್ತು ನಾನು ಈಗ ವಹಿಸಿಕೊಳ್ಳಲಿರುವ ಕರ್ತವ್ಯವನ್ನು ಶ್ರದ್ಧಾಪೂರ್ವಕವಾಗಿ ನಿರ್ವಹಿಸುತ್ತೇನೆಂದೂ, ದೈವ ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ” ಎಂದು ಹೇಳಿ ನಂತರ “ಮಾತೆರೆಗ್ಲಾ ಸೊಲ್ಮೆಲು” ಎಂದು ಸಂಸತ್ತನ್ನು ಅಭಿನಂದಿಸಿದರು.
ತುಳುನಾಡಿಗೆ, ತುಳುಭಾಷೆಗೆ ಅವರು ಸಲ್ಲಿಸಿದ ಈ ಗೌರವ ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿ ಮಾಡಿದೆ ಹಾಗೂ ಮೆಚ್ಚುಗೆ ಪಡೆದಿದೆ.

Social Icons