ತುಮಕೂರು: ಮಕ್ಕಳ ಮಾರಾಟದ ಜಾಲ ಪತ್ತೆ; ಆಸ್ಪತ್ರೆ ಸಿಬ್ಬಂದಿಯೇ ಸಾಥ್ - ಏಳು ಮಂದಿ ಅರೆಸ್ಟ್, ಐದು ಮಕ್ಕಳ ರಕ್ಷಣೆ

 


ತುಮಕೂರು: ಜಿಲ್ಲೆಯಲ್ಲಿ ವ್ಯವಸ್ಥಿತ ಮಕ್ಕಳ ಮಾರಾಟ ಜಾಲವೊಂದು ಪತ್ತೆಯಾಗಿದೆ. ಇವರು ಮಕ್ಕಳನ್ನು ಕದ್ದು ಲಕ್ಷಾಂತರ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದಾರೆ. ಇಂತಹ ಖತರ್ನಾಕ್‌ ಗ್ಯಾಂಗ್‌ ಅನ್ನು ತುಮಕೂರು ಪೊಲೀಸರು ತಮ್ಮ ಖೆಡ್ಡಾಕ್ಕೆ ಕೆಡವಿದ್ದಾಅಲರೆ.

ತುಮಕೂರಿನ ಮಹೇಶ್( 39) ಮಹಬೂಬ್ ಷರೀಫ್ ( 52) ರಾಮಕೃಷ್ಣ (53) ಹನುಮಂತರಾಜು (45) ಮುಬಾರಕ್ ಪಾಷ (44) ಸ್ಟಾಫ್ ನರ್ಸ್ ಗಳಾದ ಪೂರ್ಣಿಮಾ ( 39) ಸೌಜನ್ಯ (48) ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್‌ ತುಮಕೂರಿನಲ್ಲಿ 2022ರಿಂದ ಸಕ್ರಿಯವಾಗಿದೆ. ಇವರು ತುಮಕೂರು ಜಿಲ್ಲೆಯೊಂದರಲ್ಲಿ 9 ಮಕ್ಕಳನ್ನು ಮಾರಾಟ ಮಾಡಿದ್ದಾರೆ. 9 ಮಕ್ಕಳ ಪೈಕಿ 5 ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ.

ಜೂನ್ 09ರಂದು ಮಹದೇವಮ್ಮ ಹಾಗೂ ಮುಬಾರಕ್ ದಂಪತಿಯ 11 ತಿಂಗಳ ಹಸುಗೂಸು ಅಪಹರಣ ಆಗಿತ್ತು. ಗುಬ್ಬಿ ಪಟ್ಟಣ ಚನ್ನಬಸವೇಶ್ವರ ದೇವಸ್ಥಾನದ ಮುಂಭಾಗದಿಂದ ಈ ದಂಪತಿ ಮಗು ಅಪಹರಣ ಆಗಿತ್ತು. ಈ ದಂಪತಿಗಳು ಹಳ್ಳಿಹಳ್ಳಿಗಳಲ್ಲಿ ತಲೆ ಕೂದಲು ಖರೀದಿಸುತ್ತಾ ಹೇರ್ ಪಿನ್ ಮಾರಾಟ ಮಾಡಿ ಜೀವನ ನಡೆಸುತ್ತಿತ್ತು. ಜೂನ್  9ರಂದು ರಾತ್ರಿ ಟೆಂಟ್‌ನಲ್ಲಿ ಮಲಗಿದ್ದ ದಂಪತಿಯ 11 ವರ್ಷದ ಗಂಡು ಮಗು ಬೆಳಗ್ಗೆ ವೇಳೆಗೆ ನಾಪತ್ತೆಯಾಗಿತ್ತು. ಈ ಬಗ್ಗೆ ದಂಪತಿ ಗುಬ್ಬಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಗುಬ್ಬಿ ತಾಲ್ಲೂಕಿನ ಬಿಕ್ಕೇಗುಡ್ಡದ ರಾಮಕೃಷ್ಣಪ್ಪ ಹಾಗೂ ತುಮಕೂರಿನ ಭಾರತಿ ನಗರದ ನಿವಾಸಿ ಹನುಮಂತರಾಜು ಎಂಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜಾತ್ರೆಯಲ್ಲಿ ಟ್ಯಾಟೂ ಹಾಕುವ ಕೆಲಸ ಮಾಡುವ ಈ ಇಬ್ಬರೂ ಮಗುವನ್ನು ಕದ್ದಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ ಮಕ್ಕಳ ಮಾರಾಟ ಜಾಲದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ತಕ್ಷಣ ಅಲರ್ಟ್ ಆದ ಪೊಲೀಸರು ಪ್ರಕರಣದ ಕಿಂಗ್ ಪಿನ್ ಗಳಾದ ತುಮಕೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮ್ಯಾನೇಜರ್ ಆಗಿದ್ದ ಮಹೇಶ್, ಚಿಕ್ಕನಾಯನಕನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಫಾರ್ಮಶಿಸ್ಟ್ ಆಗಿದ್ದ ಮಹಬೂಬ್ ಷರೀಫ್, ಮಧುಗಿರಿ ತಾಲೂಕಿನ ದೊಡ್ಡರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪೂರ್ಣಿಮಾ, ಶಿರಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸೌಜನ್ಯ, ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮುಬಾರಕ್ ಎಂಬವರನ್ನು ಬಂಧಿಸಿದ್ದಾರೆ.

ಇವರು ಅವಿವಾಹಿತರಾಗಿ ಗರ್ಭಧರಿಸಿದ್ದ ಹಾಗೂ ಅಕ್ರಮವಾಗಿ ಗರ್ಭಧರಿಸಿರುವ ಮಹಿಳೆಯರನ್ನು ಪತ್ತೆಹಚ್ಚಿ ಅವರಿಂದ ಮಕ್ಕಳನ್ನ ಪಡೆದುಕೊಂಡು ಮಕ್ಕಳಿಲ್ಲದವರಿಗೆ ಮಾರಾಟ ಮಾಡುತ್ತಿದ್ದರು. ಮಕ್ಕಳ ಅವಶ್ಯಕತೆ ಇರುವ ಮಹಿಳೆಯರನ್ನು ಗರ್ಭವತಿಯಾಗಿದ್ದಾರೆಂದು ಹುಳಿಯಾರಿನ ಖಾಸಗಿ ನರ್ಸಿಂಗ್‌ ಹೋಂನಲ್ಲಿ ದಾಖಲಿಸಿ ಜನನ ದಾಖಲೆ ಸೃಷ್ಟಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಅತ್ತ ಆಸ್ಪತ್ರೆಗೆ ಬರುತ್ತಿದ್ದ ಗರ್ಭಧರಿಸಿದ ಅವಿವಾಹಿತ ಮಹಿಳೆಯರನ್ನು ಗುರುತಿಸುತ್ತಿದ್ದ ನರ್ಸ್ ಸೌಜನ್ಯಾ ಮತ್ತು ಪೂರ್ಣಿಮಾ, ಮಕ್ಕಳ ಮಾರಾಟ ಮಾಡಲು ಸಂತ್ರಸ್ತೆಯರನ್ನು ಒಪ್ಪಿಸುತ್ತಿದ್ದರು. ಇತ್ತ ಮಕ್ಕಳಿಲ್ಲದ ದಂಪತಿಯನ್ನು ಪತ್ತೆ ಹಚ್ಚುತ್ತಿದ್ದ ಮಹೇಶ್ ಹಾಗೂ ಮೆಹಬೂಬ್ ಷರೀಫ್, ಡೀಲ್ ಕುದಿರಿದ ಬಳಿಕ, ಮಕ್ಕಳಿಲ್ಲದ ದಂಪತಿಗಳಿಗೆ ತಲಾ ಒಂದು ಮಗುವಿಗೆ 2 ರಿಂದ 3 ಲಕ್ಷಕ್ಕೆ ಸೇಲ್ ಮಾಡುತ್ತಿದ್ದರು.

ಮಾರಾಟ ಜಾಲವನ್ನ ಬೇಧಿಸಿದ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್‌ ಕೆ ವಿ ಅಭಿನಂಧಿಸಿದ್ದಾರೆ.