ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ಚಿಕ್ಕಣ್ಣನಿಗೂ ನೋಟಿಸ್ ನೀಡಲಿದ್ದಾರಂತೆ ಪೊಲೀಸರು



ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ 19 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ದಿನ ಕಳೆದಂತೆ ಪ್ರಕರಣ ಹೊಸಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಚಿಕ್ಕಣ್ಣನಿಗೆ ಪೊಲೀಸರು ನೋಟಿಸ್‌ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್ 08ರಂದು ಘಟನೆ ನಡೆದ ದಿನ ನಟ ದರ್ಶನ್ ಪ್ರಕರಣದ ಮತ್ತೋರ್ವ ಆರೋಪಿ ವಿನಯ್ ಮಾಲಕತ್ವದ ಸ್ಟೋನಿ ಬ್ರೂಕ್ ರೆಸ್ಟೋ ಬಾರ್‌ನಲ್ಲಿ ಪಾರ್ಟಿ ಮಾಡಿದ್ದರು ಎಂದು ತಿಳಿದು ಬಂದಿದೆ. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸೇರಿದಂತೆ ಕೆಲವರು ಭಾಗಿಯಾಗಿದ್ದರು. ಬಳಿಕ ಕೆಲಸ ಇರುವುದಾಗಿ ಹೇಳಿ ನಟ ದರ್ಶನ್ ಅಲ್ಲಿಂದ ಹೊರಟಿದ್ದರಂತೆ. ರೇಣುಕಸ್ವಾಮಿ ಹತ್ಯೆ ನಡೆದ ದಿನವೇ ಪಾರ್ಟಿ ಮಾಡಿದ್ದರಿಂದ ಈ ಬಗ್ಗೆ ವಿಚಾರಿಸಲು ನೋಟಿಸ್‌ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕೊಲೆ ವಿಚಾರವಾಗಿ ಪಾರ್ಟಿಯಲ್ಲಿ ಏನಾದರೂ ಚರ್ಚೆ ನಡೆದಿತ್ತಾ ಎಂಬುದರ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಪಾರ್ಟಿಯಲ್ಲಿ ದರ್ಶನ್‌ರೊಂದಿಗೆ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಚಿಕ್ಕಣ್ಣರಿಗೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲು ಅನ್ನಪೂರ್ಣೇಶ್ವರಿನಗರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.