ಸಂಪಾದಕೀಯ | ಸೆಲೆಬ್ರಿಟಿಗಳ 'ವಿವಾಹ ವಿಚ್ಛೇದನ'ಗಳಿಗೇಕೆ ಮೌಲ್ಯ ಕೊಡಬೇಕು? Celebretice Divorce



ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿ ಮತ್ತು ನಟಿ‌ ನಿವೇದಿತಾ ಗೌಡ ಇತ್ತೀಚೆಗಷ್ಟೇ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದರು. ಇಬ್ಬರೂ ಪ್ರತ್ಯೇಕಗೊಂಡು ಅವರವರ ಮನೆ ಸೇರಿದ್ದಾರೆ. ಆದರೆ ಈ ವಿಚಾರದಲ್ಲಿನ ಸುದ್ದಿ ಪ್ರಚಾರಕ್ಕೆ ಇನ್ನೂ ಬ್ರೇಕ್ ಬಿದ್ದಂತಿಲ್ಲ. ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ಈ ಡಿವೋರ್ಸ್ ವಿಚಾರದ್ದೇ ಚರ್ಚೆ. ಇಂತಹದ್ದೇ ಕಾರಣಕ್ಕೇ ಅವರು ಡಿವೋರ್ಸ್ ಪಡೆದಿದ್ದಾರೆ ಎಂಬ ವಿಚಾರಗಳೂ ಗುಲ್ಲನ್ನೂ ಎಬ್ಬಿಸಲಾಗುತ್ತಿದೆ. ಆದ್ದರಿಂದ ಅವರಿಬ್ಬರೂ ಜೊತೆಯಾಗಿ ಬಂದು ಸುದ್ದಿಗೋಷ್ಠಿ ಮಾಡಿ ತಾವೇಕೆ ಡಿವೋರ್ಸ್ ಪಡೆದಿದ್ದೇವೆ ಎಂದು ಸ್ಪಷ್ಟನೆ ನೀಡಬೇಕಾಯಿತು.

ಮೊನ್ನೆಯಿಂದ ಕನ್ನಡದ ಮೇರುನಟ ಡಾ.ರಾಜ್ ಮನೆತನದ ಕುಡಿ ಯುವ ರಾಜ್‌ಕುಮಾರ್ ವಿವಾಹ ವಿಚ್ಛೇದನವೂ ಭಾರೀ ಚರ್ಚೆಯಲ್ಲಿದೆ. ಆದ್ದರಿಂದ ಇನ್ನೊಂದಷ್ಟು ದಿನ ಚಂದನ್ ಶೆಟ್ಟಿ - ನಿವೇದಿತಾ ಗೌಡ ವಿವಾಹ ವಿಚ್ಛೇದನದೊಂದಿಗೆ ಯುವ ರಾಜ್‌ಕುಮಾರ್ - ಶ್ರೀದೇವಿ ಭೈರಪ್ಪ ವಿವಾಹ ವಿಚ್ಛೇದನ ವಿಚಾರವೂ ಸೋಶಿಯಲ್ ಮೀಡಿಯಾ, ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಯಾಗೋದರಲ್ಲಿ ಯಾವ ಅನುಮಾನವೂ ಇಲ್ಲ‌. 

ತಿಂಗಳುಗಳಾಚೆ ಭಾರತ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಡಿವೋರ್ಸ್ ವಿಚಾರ ಒಂದಷ್ಟು ದಿನ ಪ್ರಚಾರ ಗಿಟ್ಟಿಸಿಕೊಂಡಿತ್ತು. ಒಂದಷ್ಟು ಸಮಯಗಳ ಹಿಂದೆ ನಟಿ ರಾಕಿ ಸಾವಂತ್ ಹಾಗೂ ಮೈಸೂರು ಮೂಲದ ಉದ್ಯಮಿ ಆದಿಲ್ ವಿವಾಹ ವಿಚ್ಛೇದನ, ತೆಲುಗು ನಟ ಚೈತನ್ಯ ಅಕ್ಕಿನೇನಿ ಹಾಗೂ ನಟಿ ಸಮಂತಾ ರುತ್ ಪ್ರಭು ಡಿವೋರ್ಸ್ ವಿಚಾರಗಳು ಭಾರೀ ಸದ್ದು ಮಾಡಿತ್ತು‌.

ಇತ್ತೀಚೆಗೆ ಮಾಧ್ಯಮಗಳು ಸೆಲೆಬ್ರಿಟಿಗಳ ಬದುಕಿನ ಸಣ್ಣಸಣ್ಣ ವಿಚಾರಗಳಿಗೆ ತಲೆಕೆಡಿಸಲಾರಂಭಿಸುತ್ತಿದೆ. ಕೆಲವೊಂದು ಯೂಟ್ಯೂಬ್ ಚ್ಯಾನೆಲ್ ಗಳಂಥೂ ಅವರ ವೈಯುಕ್ತಿಕ ಬದುಕನ್ನು ತಾವೇ ಕಣ್ಣಾರೆ ಕಂಡಂತೆ ಪುಂಖಾನುಪುಂಖವಾಗಿ ಮಾತನಾಡುತ್ತಿದೆ. ಅವರು ಸೆಲೆಬ್ರಿಟಿಗಳಾಗಿರಬಹುದು. ಆದರೆ ಸೆಲೆಬ್ರಿಟಿಗಳಿಗೆ ಅವರದ್ದೇ ಆದ ವೈಯಕ್ತಿಕ ಜೀವನವಿಲ್ಲವೇ?. ಜನರಿಗೇಕೆ ಅವರು ತಮ್ಮ ವೈಯಕ್ತಿಕ ಬದುಕಿನ ವಿವರಗಳನ್ನು ನೀಡಬೇಕು?. ಇದರಿಂದ ಸಮಾಜಕ್ಕೇನು ಲಾಭ?. ಹಾಗೆ ನೋಡಲು ಹೋದರೆ, ಸಾರ್ವಜನಿಕ ಜೀವನದಲ್ಲಿ ಇರುವವರು ಮತ್ತೊಬ್ಬರಿಗೆ ಆದರ್ಶವಾಗಿರಬೇಕು. ಅವರ ಜೀವನಾದರ್ಶ ಅಭಿಮಾನಿಗಳಿಗೆ, ಜನಸಾಮಾನ್ಯರಿಗೆ ದಾರಿದೀಪವಾಗಬೇಕು. ಅದು ಬಿಟ್ಟು ಅವರ ಜೀವನದಲ್ಲಿ ಬಿರುಕು ಬಿಟ್ಟರೆ ನಾವೇಕೆ ಆಕಾಶ ಕಳಚಿ ತಲೆಗೆ ಬಿದ್ದಂತೆ ಚುಯಿಂಗಮ್ ನಂತೆ ದಿನವೂ ಅದೇ ಸುದ್ದಿಯನ್ನು ಎಳೆದೆಳೆದು ಬಿತ್ತರಿಸಬೇಕು.

ಸುದ್ದಿಮಾಡಬೇಕೆಂದಿದ್ದಲ್ಲಿ ದೇಶದ, ರಾಜ್ಯದ ವಿಚಾರಗಳಲ್ಲಿ ಸುದ್ದಿ ಮಾಡಲು ಬೇಕಾದಷ್ಟು ವಿಚಾರಗಳು ಇವೆ. ಆದರೆ ಸುದ್ದಿಮಾಧ್ಯಮಗಳಿಗೆ ಅದಾವುದೂ ಬೇಡ. ಅದರ ಗೊಡವೆ ಗೋಜಿಗೂ ಹೋಗುವುದಿಲ್ಲ ಬಿಡಿ. ಏಕೆಂದರೆ ಓಲೈಕೆಯ ರಾಜಕಾರಣದಲ್ಲಿ ಮುಳುಗಿಹೋಗಿರುವ ಮಾಧ್ಯಮಗಳಿಗೆ ಇಂತಹ ವಸ್ತುಗಳೇ ದಿನವಿಡೀ ಸುದ್ದಿ ಬಿತ್ತರಿಸಲು ಸುಲಭದ ತುತ್ತು. ಈ ಮೂಲಕ ಇನ್ನೊಬ್ಬರ ಬದುಕಿನಲ್ಲಿ ಇಣುಕಿ ನೋಡಿ ಅದರ ಬೆಚ್ಚಗೆಯಲ್ಲಿ ಚಳಿ ಕಾಯಿಸಲು ಹೋಗುತ್ತಿದೆ. ಇನ್ನಾದರೂ ಸುದ್ದಿ ಮಾಧ್ಯಮಗಳು ಇಂತಹ ವಿಚಾರಗಳಿಗೆ ಕಡಿವಾಣ ಹಾಕಿ ದೇಶದ ಸುಭದ್ರತೆಗೆ, ಅಭಿವೃದ್ಧಿಗೆ, ಜನೋಪಯೋಗಿ ಆಗುವ ವಿಚಾರಗಳಿಗೆ ಫೋಕಸ್ ಮಾಡಿ ಸುದ್ದಿ ಬಿತ್ತರಿಸಲಿ ಎಂಬುದೇ ನಮ್ಮ ಆಶಯ.