ಹುಷಾರ್..!! ಇನ್ಮುಂದೆ ವಿಮಾನದಲ್ಲಿ ದುಬೈಗೆ ಈ ವಸ್ತುಗಳನ್ನು Carry ಮಾಡುವಂತಿಲ್ಲ

ನವದೆಹಲಿ: ವಿಮಾನ ಪ್ರಯಾಣ ಎಲ್ಲರ ಕನಸು. ಮೋಡಗಳ ನಡುವೆ ಸಾಗುವ ವಿಮಾನಯಾನದ ಅನುಭವ ಅದ್ಭುತ. ಆದರೆ ವಿಮಾನ ಪ್ರಯಾಣ ಬಸ್ ಅಥವಾ ಟ್ರೈನ್ ನಲ್ಲಿ ಪ್ರಯಾಣಿಸಿದಂತಲ್ಲ. 



ವಿಮಾನದಲ್ಲಿ ಪ್ರಯಾಣಿಸಲು ಕೆಲವೊಂದಿಷ್ಟು ನಿಯಮಗಳನ್ನು ಅನುಸರಿಸಬೇಕು ಎಂಬ ವಿಷಯ ನಮಗೆ ಈಗಾಗಲೇ ತಿಳಿದಿದೆ. ಅದರಲ್ಲೂ ಲಗೇಜ್‌ ಪ್ಯಾಕ್‌ ಮಾಡುವ ವೇಳೆ ಯಾವ ವಸ್ತುಗಳನ್ನು ತೆಗೆದುಕೊಳ್ಳಬೇಕು, ಯಾವುದು ಬಿಡಬೇಕು ಎಂಬ ಕನಿಷ್ಠ ಪ್ರಜ್ಞೆ ಇರಲೇಬೇಕು. ಏಕೆಂದರೆ ನಮಗಿಷ್ಟ ಬಂದ ಅಥವಾ ಬೇಕಾಗುವ ಎಲ್ಲಾ ವಸ್ತುಗಳನ್ನು ವಿಮಾನದಲ್ಲಿ ಕೊಂಡೊಯ್ಯುವಂತಿಲ್ಲ. 

ವಿಮಾನ ಪ್ರಯಾಣದ ವೇಳೆ ಕೆಲವೊಂದು ವಸ್ತುಗಳನ್ನು ಕೊಂಡೊಯ್ಯಲು ಈ ಹಿಂದೆಯೇ ಕೆಲವೊಂದು ನಿಬಂಧನೆಗಳಿದ್ದವು.  ಚೂಪಾದ ವಸ್ತುಗಳು, ಬೆಂಕಿ ಪಟ್ಟಣ, ಮಾಂಸ, ಹಾನಿಕಾರಕ ವಸ್ತುಗಳನ್ನು ಸಾಗಿಸಲು ಅವಕಾಶವಿರಲಿಲ್ಲ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ವಿಮಾನ ನಿಲ್ದಾಣದ ನಿಯಮಗಳನ್ನು ಹೊಸದಾಗಿ ನವೀಕರಿಸಲಾಗಿದೆ. 

ಈ ಹಿಂದೆ ಪ್ರಯಾಣಿಕರು ತಮ್ಮ ಕ್ಯಾಬಿನ್ ಸಾಮಾನು ಸರಂಜಾಮುಗಳಲ್ಲಿ ಔಷಧಿಗಳಂತಹ ಅಗತ್ಯ ವಸ್ತುಗಳನ್ನು ಸಾಗಿಸುತ್ತಿದ್ದರು. ಆದರೆ ಈಗ ಹಾಗಲ್ಲ, ಕೆಲವು ಔಷಧಿಗಳನ್ನು ವಿಶೇಷವಾಗಿ ದುಬೈಗೆ ಹೋಗುವ ವಿಮಾನಗಳಲ್ಲಿ ಸಾಗಿಸಲು ಅವಕಾಶವಿರುವುದಿಲ್ಲ. 

ಅನೇಕ ಪ್ರಯಾಣಿಕರು ಸಾಮಾನ್ಯವಾಗಿ ಯಾವ ವಸ್ತುಗಳನ್ನು ನಿರ್ಬಂಧಿಸಲಾಗಿದೆ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆ ವಿಮಾನ ನಿಲ್ದಾಣಕ್ಕೆ ಬಂದು ಸಮಸ್ಯೆ ಅನುಭವಿಸುತ್ತಾರೆ. ಇದು ತಮಗೆ ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಅನಗತ್ಯ ಜಗಳಕ್ಕೆ ಕಾರಣವಾಗುತ್ತದೆ. ಆದ್ದರಿಂದ, ವಿಶೇಷವಾಗಿ ದುಬೈಗೆ ವಿಮಾನವನ್ನು ಏರುವ ಮೊದಲು ಈ ನಿಯಮಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. 

ಯಾವುದೇ ಕಾರಣಕ್ಕೂ ಕೊಕೇನ್, ಹೆರಾಯಿನ್ ಮತ್ತು ಗಾಂಜಾಗಳಂತಹ ಮಾದಕ ದ್ರವ್ಯಗಳು, ಹಾಗೆಯೇ ವೀಳ್ಯದೆಲೆಗಳು, ದಂತಗಳು, ಜೂಜಿನ ಉಪಕರಣಗಳನ್ನು ಕೊಂಡೊಯ್ಯಲು ಅವಕಾಶ ಇಲ್ಲ. ಇದಲ್ಲದೆ, ಮುದ್ರಿತ ವಸ್ತುಗಳು, ಕಲಾಕೃತಿಗಳು, ಮಾಂಸಾಹಾರಿ ಭಕ್ಷ್ಯಗಳು ಸೇರಿದಂತೆ ಕೆಲವು ಆಹಾರಗಳು ಮತ್ತು ನಕಲಿ ಕರೆನ್ಸಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇನ್ನು, ದುಬೈಗೆ ನಿಮ್ಮ ಪ್ರವಾಸದ ಸಮಯದಲ್ಲಿ, ದೇಶಕ್ಕೆ ತರುವ ಮೊದಲು ಪೂರ್ವ ಪಾವತಿ ಮತ್ತು ಕ್ಲಿಯರೆನ್ಸ್ ಅಗತ್ಯವಿರುವ ಕೆಲವು ಉತ್ಪನ್ನಗಳಿವೆ. ಇವುಗಳಲ್ಲಿ ಸಸ್ಯಗಳು, ರಸಗೊಬ್ಬರಗಳು, ಪುಸ್ತಕಗಳು, ನಿರ್ದಿಷ್ಟ ಔಷಧಗಳು, ವೈದ್ಯಕೀಯ ಉಪಕರಣಗಳು, ಸೌಂದರ್ಯವರ್ಧಕಗಳು, ಎಲೆಕ್ಟ್ರಾನಿಕ್ ಸಾಧನಗಳು, ಆಲ್ಕೊಹಾಲ್ ಯುಕ್ತ ಪಾನೀಯಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ಇ-ಸಿಗರೇಟ್‌ಗಳು ಮತ್ತು ಎಲೆಕ್ಟ್ರಾನಿಕ್ ಹುಕ್ಕಾಗಳು ಸೇರಿವೆ. ನಿರ್ದಿಷ್ಟ ಔಷಧಿಗಳನ್ನು ಕೂಡ ದುಬೈಗೆ ಸಾಗಿಸಲು  ನಿರ್ಬಂಧಿಸಲಾಗಿದೆ. ಹೀಗಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಈ ಬಗ್ಗೆ ಗಮನ ಹರಿಸುವುದು ಸೂಕ್ತ.