ಚುನಾಯಿತ ಜನಪ್ರತಿನಿಧಿ ರಾಜೀನಾಮೆ ನೀಡಿದಾಗ, ಮೃತಪಟ್ಟಾಗ ಆ ಕ್ಷೇತ್ರಕ್ಕೆ ಮರುಚುನಾವಣೆ ನಡೆಯುವುದು ವಾಡಿಕೆ. ಇದರೊಂದಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅಥವಾ ಒಂದು ಹುದ್ದೆಗೆ ಚುನಾಯಿತರಾಗಿ ಮತ್ತೊಂದು ಹುದ್ದೆಗೂ ಸ್ಪರ್ಧಿಸಿ ಒಂದನ್ನು ಅನಿವಾರ್ಯವಾಗಿ ತೊರೆಯಬೇಕಾದಾಗ ರಾಜೀನಾಮೆ ನೀಡುತ್ತಾರೆ. ಈ ಸಂದರ್ಭದಲ್ಲಿ ಉಪಚುನಾವಣೆ ನಡೆಯುತ್ತದೆ.
ಇದರಲ್ಲಿ ಮೊದಲನೇಯದ್ದು ಸಹಜ. ಆದರೆ ಎರಡನೇಯದು ಕಾನೂನನ್ನೇ ದುರ್ಬಳಕೆ ಮಾಡಿಕೊಂಡು ಅಧಿಕಾರ ದಾಹಿಗಳು ಮಾಡುವ ಪ್ರಹಸನ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ರಾಯ್‌ಬರೇಲಿ ಮತ್ತು ವಯನಾಡ್ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಇದೀಗ ವಯನಾಡ್ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲಿ ಅನಿವಾರ್ಯವಾಗಿ ಮರು ಚುನಾವಣೆ ನಡೆಯಲಿದೆ.
ನಮ್ಮ ರಾಜ್ಯದ ವಿಚಾರಕ್ಕೆ ಬಂದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಮೂವರು ಶಾಸಕರಾಗಿದ್ದುಕೊಂಡೇ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಈಗ ಗೆದ್ದವರೆಲ್ಲಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಬೇಕಾಗುತ್ತದೆ.
ಈ ನಡುವೆ ಶಾಸಕನಾಗಿ, ಉಪಮುಖ್ಯಮಂತ್ರಿಯೂ ಆಗಿರುವ ಡಿಕೆ ಶಿವಕುಮಾರ್ ತೆರವಾದ ಕ್ಷೇತ್ರದಿಂದ ಯಾವುದೇ ಕಾರಣವಿಲ್ಲದೇ ಮತ್ತೊಮ್ಮೆ ಚುನಾವಣೆ ಎದುರಿಸಲು ಚಿಂತನೆ ನಡೆಸಿದ್ದಾರೆ.
ಇದು ಒಂದೆರಡು ಉದಾಹರಣೆಗಳಷ್ಟೇ. ಮೋದಿ ಸಹಿತ ಹಲವು ಘಟಾನುಘಟಿ ನಾಯಕರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದಂತಹ ಘಟನೆ ಈ ಹಿಂದೆಯೂ ನಡೆದಿದೆ.
ಆದರೆ ಇಲ್ಲಿ ವಿಷಯ ಇರುವುದು ಇಷ್ಟೇ. ತಮ್ಮ ರಾಜಕೀಯ ಭವಿಷ್ಯವನ್ನು ರಕ್ಷಿಸಿಕೊಳ್ಳಲು ಅಥವಾ ಹೆಚ್ಚಿನ ಅಧಿಕಾರದ ಆಸೆಗೆ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮರು ಚುನಾವಣೆಗೆ ಖರ್ಚಾಗುವ ಹಣವನ್ನು ನಮ್ಮ ತೆರಿಗೆಯಿಂದ ಯಾಕೆ ಪೋಲು ಮಾಡಬೇಕು. ರಾಜಕಾರಣಿಗಳು ಈ ರೀತಿ ಸ್ಪರ್ಧಿಸಿದಾಗ ಜನಸಾಮಾನ್ಯರಿಗೆ ಇಲ್ಲವೇ ದೇಶಕ್ಕಾಗುವ ಲಾಭವೇನು?. ದೇಶಕ್ಕೆ ಆರ್ಥಿಕ ಹೊರೆಯೇ ಹೊರತು ಯಾವುದೇ ಲಾಭವಿಲ್ಲ.
ಹಾಗಂತ ಇದಕ್ಕೆ ಕಾನೂನು ಅವಕಾಶ ನೀಡುತ್ತದೆ ಎಂಬ ಸಬೂಬು ಹೇಳಬಹುದು. ಆದರೆ ಕಾನೂನು ರಚನೆ, ತಿದ್ದುಪಡಿ ಮಾಡುವವರೂ ಜನಪ್ರತಿನಿಧಿಗಳೇ ಆಗಿರುವುದರಿಂದ ಅವರ ಹಿತಾಸಕ್ತಿ ಗೆ ವಿರುದ್ಧವಾದ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಕನಸಿನ ಮಾತು.
ಇಂತಹ ಸಂದರ್ಭಗಳಲ್ಲಿ ರಾಜೀನಾಮೆ ನೀಡಿದ ವ್ಯಕ್ತಿಯೇ ಈ ಆರ್ಥಿಕ ಹೊರೆಯನ್ನು ಹೊತ್ತುಕೊಳ್ಳಬೇಕೆಂಬ ಕಠಿನ ಕಾನೂನು ಮಾಡಿದ್ದಲ್ಲಿ ಕಡಿವಾಣ ಬೀಳುವ ಸಾಧ್ಯತೆ ಇದೆ.

Social Icons