ಬುಡಾ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ: ಬುಡಾ ಅಧ್ಯಕ್ಷ ಬೇಬಿ ಕುಂದರ್ ಭರವಸೆ

 



ವರದಿ: ಹರೀಶ್ ಮಾಂಬಾಡಿ


ಬಂಟ್ವಾಳ ಯೋಜನಾ ಪ್ರಾಧಿಕಾರದ ಮೂಲಕ ಪ್ರಾಮಾಣಿಕವಾಗಿ, ಭ್ರಷ್ಟಾಚಾರ ಮುಕ್ತ ವಾತಾವರಣದೊಂದಿಗೆ ಜನರ ಸೇವೆ ನಡೆಸುವುದಾಗಿ ಹೇಳಿರುವ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ವಾರ್ಷಿಕ ಬಜೆಟ್ ಹಾಗೂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅವರು ಪ್ರಾಧಿಕಾರದಲ್ಲಿ ಒಟ್ಟು ನಾಲ್ಕು ಕೋಟಿ ರೂ ಹಣವನ್ನು ಡೆಪಾಸಿಟ್ ಮಾಡಲಾಗಿದೆ. ಇದರ ಮುಖಾಂತರ ಪುರಸಭಾ ವ್ಯಾಪ್ತಿಯಲ್ಲಿರುವ ಒಟ್ಟು ಮೂರು ಕೆರೆಗಳನ್ನು ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಅಭಿವೃದ್ಧಿ ಮಾಡಲು ಸಭೆಯಲ್ಲಿ ನಿರ್ಣಯ ಮಾಡಿದ್ದೇವೆ ಎಂದರು. 2.50 ಎಕರೆಯಲ್ಲಿ ಅರ್ಭಿಗುಡ್ಡೆ ಕೆರೆ, 45 ಸೆಂಟ್ಸ್ ವ್ಯಾಪ್ತಿಯಲ್ಲಿ ನರಹರಿ ಪರ್ವತ ಹಾಗೂ 18 ಸೆಂಟ್ಸ್ ಜಾಗದಲ್ಲಿ ಬೋಳಂಗಡಿಯಲ್ಲಿ ಕೆರೆಗಳಿದ್ದು ಇದರ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.


ನಾಗರಿಕ ಸೌಲಭ್ಯ ನಿವೇಶನದ ಮೂಲಕ ಆರು ನಿವೇಶನಗಳನ್ನು ಕಾನೂನಾತ್ಮಕವಾಗಿ ಹಂಚಿಕೆ ಮಾಡಿ, ಅ ಮೂಲಕ ಬೂಡಕ್ಕೆ ಬರುವ ಆದಾಯವನ್ನು ತಾಲೂಕಿನ ಸರ್ವೋತ್ತಮ ಅಭಿವೃದ್ಧಿಗೆ ಮೀಸಲು ಇಡುತ್ತೇವೆ ಎಂದು ತಿಳಿಸಿದರು. ಸಾರ್ವಜನಿಕ ಕುಂದುಕೊರತೆಗಳು ಬಗ್ಗೆ ದೂರುಗಳು ಬಾರದಂತೆ, ಪಾರದರ್ಶಕವಾಗಿ ಹಿರಿಯ ನಾಗರಿಕರಿಗೆ ತ್ವರಿತ ಗತಿಯ ಸೇವೆ ಮಾಡುವಂತೆ ನಿರ್ಣಯ ಮಾಡಲಾಗಿದೆ, ಅತೀ ಶೀಘ್ರವಾಗಿ ಪುರಸಭಾ ವ್ಯಾಪ್ತಿಗೆ ಸಂಬಂಧಿಸಿದಂತೆ ಹಿರಿಯ ನಾಗರಿಕರ ಸಭೆ ಕರೆದು ಮಾಹಿತಿ ಸಲಹೆ ಪಡೆದು ಸಮಸ್ಯೆಗಳ ಪರಿಹಾರಕ್ಕೆ ನಿರ್ಣಯ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.

ಪುರಸಭೆ ಮತ್ತು ಬೂಡಗೆ ಸಂಬಂಧಿಸಿ ಅನೇಕ ಕಡೆಗಳಲ್ಲಿ ಜಮೀನು ಒತ್ತುವರಿಯಾಗಿದ್ದು, ಅದೆಲ್ಲವನ್ನು ಕಾನೂನು ಪ್ರಕಾರ ವಾಪಸು ಪಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿರ್ಣಯ ಮಾಡಲಾಗಿದೆ. ಸುಂದರ ಬಂಟ್ವಾಳ ನಿರ್ಮಾಣದ ಜೊತೆಯಲ್ಲಿ, ನೆಮ್ಮದಿ ಬದುಕು ನಡೆಸಬೇಕು ಎಂಬ ಕನಸು ಪ್ರಾಧಿಕಾರದ್ದಾಗಿದೆ. ಅತೀ ಅಗತ್ಯವಾಗಿ ಬಿಸಿರೋಡಿನಲ್ಲಿ ಖಾಸಗಿ ಬಸ್ ನಿಲ್ದಾಣದ ನಿರ್ಮಾಣ ಆಗಬೇಕಾಗಿದೆ ಈ ನಿಟ್ಟಿನಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದೇವೆ ಎಂದ ಅವರು, ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಖಾಸಗಿ ಬಸ್ ನಿರ್ಮಾಣದ ಕನಸು ಹೊಂದಿದ್ದು, ಈಡೇರಿಸಲು ಪ್ರಾಧಿಕಾರದ ಮೂಲಕ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಬಿಸಿರೋಡಿನಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕ್ರಮಕ್ಕೆ ಸಭೆಯಲ್ಲಿ ಚರ್ಚೆಗಳು ನಡೆದಿದೆ. ಅನಧಿಕೃತ ಕಟ್ಟಡಗಳ ಬಗ್ಗೆ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇವೆ ಎಂದು ಅವರು ತಿಳಿಸಿದರು. ಸಿಂಗಲ್ ಸೈಟ್ ಸಮಸ್ಯೆಯನ್ನು ಬೂಡದ ಮೂಲಕ ನಿವಾರಣೆಗಾಗಿ ನಿರ್ಧಾರ, ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದವರ ಜೊತೆ ಕುಳಿತು ಕೊಂಡು ಮಾತುಕತೆಯ ಮೂಲಕ ನಿವಾರಣೆಗಾಗಿ ಚರ್ಚೆ ಮಾಡುವ ಭರವಸೆ ನೀಡಿದರು.ಪ್ರಾಧಿಕಾರದ ಸದಸ್ಯರಾದ ಮನೋಹರ ನೇರಂಬೋಳು, ರಝಾಕ್, ಹರೀಶ್, ಪ್ರಾಧಿಕಾರದ ಕಾರ್ಯದರ್ಶಿ ಅಭಿಲಾಷ್ ಉಪಸ್ಥಿತರಿದ್ದರು.