ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜ್ಯ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ ಮಾಡಿದೆ. ಅದೂ ಪೆಟ್ರೋಲ್‌ಗೆ 3ರೂ. ಹಾಗೂ ಡೀಸೆಲ್‌ಗೆ 3.50 ರೂ. ಹೆಚ್ಚಳ ಮಾಡಿದೆ. ರಾಜ್ಯದಲ್ಲಿ ಪೆಟ್ರೋಲ್ - ಡೀಸೆಲ್ ದರ ಏರಿಕೆಯ ಬಗ್ಗೆ ಆಡಳಿತ ಹಾಗೂ ವಿರೋಧಪಕ್ಷಗಳ ನಡುವೆ ಜಟಾಪಟಿ ತೀವ್ರಗೊಂಡಿದೆ. ಗ್ಯಾರಂಟಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿ ಬೆಲೆ ಇಳಿಕೆ ಮಾಡಬೇಕೆಂದು ಪಟ್ಟು ಹಿಡಿದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ.
ಆದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪೆಟ್ರೋಲ್ - ಡೀಸೆಲ್ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಸಮರ್ಥನೆ ನೀಡುತ್ತಿದ್ದಾರೆ. ರಾಜ್ಯದ ತೆರಿಗೆ ಪಾಲನ್ನು ಕೇಂದ್ರ ಕೊಡದೆ ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲ ಕ್ರೋಢೀಕರಣ ಸಾಧ್ಯವಾಗುತ್ತಿಲ್ಲ. ಆದ್ದರಿಂದ ತೆರಿಗೆ ಹೆಚ್ಚಳ ಅನಿವಾರ್ಯ ಎಂಬುದು ರಾಜ್ಯ ಸರ್ಕಾರದ ವಾದ. ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಾಗಿದೆ. ಕೇಂದ್ರ ಸರಕಾರ ತೆರಿಗೆ ಪಾಲನ್ನು ಕೊಡದಿದ್ದರೆ, ಅದರ ಹೊರೆಯನ್ನು ರಾಜ್ಯದ ಜನತೆಯ ಮೇಲೆ ಹೊರಿಸುವುದು ಎಷ್ಟು ಸರಿ?. ಕೇಂದ್ರದಿಂದ ತೆರಿಗೆ ಹಣ ಬಾರದಿದ್ದಲ್ಲಿ ಅದನ್ನು ರಾಜ್ಯ ಹೇಗಾದರೂ ತರಿಸಬೇಕೇ ವಿನಹ ರಾಜ್ಯದ ಜನತೆ ಮೇಲೆ ದರ ಏರಿಕೆ ಬರೆ ಹಾಕುವುದಲ್ಲ.
ಈಗಾಗಲೇ ತರಕಾರಿಯಿಂದ ಹಿಡಿದು ಎಲ್ಲಾ ದಿನಸಿ ಸಾಮಾಗ್ರಿಗಳ ಬೆಲೆ, ಅಡುಗೆ ಅನಿಲ ಬೆಲೆ ಮುಗಿಲು ಮುಟ್ಟಿದೆ. ನಾವು ಕೊಡುವ ಗ್ಯಾರಂಟಿಯಿಂದ ಎಲ್ಲರೂ ಸುಖವಾಗಿ ಜೀವನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಬೆಲೆ ಏರಿಕೆಯಿಂದ ಜನರು ಈಗಾಗಲೇ ಕಂಗೆಟ್ಟಿದ್ದಾರೆ. ಇದರ ನಡುವೆ ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆಯೂ ಆದಲ್ಲಿ ಮತ್ತೆ ಎಲ್ಲಾ ಸಾಮಾಗ್ರಿಗಳ ಮೇಲೆ ಬೆಲೆ ಹೆಚ್ಚಳವಾಗಲಿದೆ. ಇದರಿಂದ ರಾಜ್ಯದ ಜನತೆಯ ಸ್ಥಿತಿ ಬಾಣಾಲೆಯಿಂದ ಬೆಂಕಿಗೆ ಬೀಳುವಂತಾಗಲಿದೆ.
ಇನ್ನು ವಿರೋಧ ಪಕ್ಷ ಬಿಜೆಪಿ ಬೆಲೆಯೇರಿಕೆ ಎಂದು ರಾಜ್ಯ ಸರಕಾರದ ಮೇಲೆ ಮುಗಿಬಿದ್ದಿದೆ. ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಅಲ್ಲದೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನ ದೊರಕದಿರುವ ಪರಿಣಾಮ ರಾಜ್ಯ ಕಾಂಗ್ರೆಸ್ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ, ಸರಕಾರ ದಿವಾಳಿಯಾಗಿರುವ ಮುನ್ಸೂಚನೆ, ಗ್ಯಾರಂಟಿ ಎಂದು ಹೇಳಿ ಜನತೆಗೆ ಚೊಂಬು ನೀಡುತ್ತಿದೆ ಎಂದು ಪುಂಖಾನುಪುಂಖವಾಗಿ ಅಸ್ತ್ರಗಳನ್ನು ಬಿಡಲಾರಂಭಿಸಿದೆ. ರಾಜ್ಯ ಸರಕಾರದಲ್ಲಿ ಸ್ವಲ್ಪ ಅಲುಗಾಡಿದರೂ ಅದಕ್ಕೆ ರಾಜ್ಯದ ಬಡಜನರಿಗೆ ನೀಡುವ ಗ್ಯಾರಂಟಿಯನ್ನೇ ಹೊಣೆ ಮಾಡಲು ತೊಡಗುತ್ತದೆ ಬಿಜೆಪಿ. ಇದೀಗ ತೈಲಬೆಲೆಯೇರಿಕೆ ಆದಾಗ ಮತ್ತೆ ಗ್ಯಾರಂಟಿಗಳ ಮೇಲೆ ಬಿಜೆಪಿ ಮುಗಿಬಿದ್ದಿದೆ.
ಹಿಂದೆ ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು 80ರಿಂದ 100ರೂಪಾಯಿಯ ಗಡಿಯನ್ನು ಮೀರಿಸಿದಾಗ, ಡೀಸೆಲ್ ಬೆಲೆಯನ್ನು 60ರಿಂದ 90 ರೂ.ನಷ್ಟು ಹೆಚ್ಚಳ ಮಾಡಿದಾಗ ತುಟಿಪಿಟಿಕ್ ಎನ್ನದ ರಾಜ್ಯ ಬಿಜೆಪಿಗೆ ಈಗ ರಾಜ್ಯದ ಜನತೆ ಬಗ್ಗೆ ಇಲ್ಲದ ಕಾಳಜಿ ಮೂಡಿದೆ. ಗ್ಯಾಸ್ ಬೆಲೆ ಗಗನಕ್ಕೇರಿದಾಗಲೂ, ಸಬ್ಸಿಡಿಯನ್ನೂ ಕೊಡದಿದ್ದಾಗಲೂ ರಾಜ್ಯ ಬಿಜೆಪಿ ಬಾಯಿ ಬಿಟ್ಟಿರಲಿಲ್ಲ. ಆದರೆ ಇದೀಗ ಅಬ್ಬರಿಸಿ ಬೊಬ್ಬಿರಿದು ಪ್ರತಾಪ ಮೆರೆಯುತ್ತಿದೆ. ಆಗ ಇಲ್ಲದ ಜನತೆಯ ಕಾಳಜಿ ಈಗೇಕೆ?.
ಒಟ್ಟಿನಲ್ಲಿ ರಾಜ್ಯ ಸರಕಾರ ಅನಿರೀಕ್ಷಿತವಾಗಿ ಮಾಡಿರುವ ಪೆಟ್ರೋಲ್ - ಡೀಸೆಲ್ ಬೆಲೆಯೇರಿಕೆ ಹೆಚ್ಚಿನ ಕ್ಷೇತ್ರಗಳ ಮೇಲೆ ಪರಿಣಾಮ ಬೀಳುವ ಸಾಧ್ಯತೆಯಿದೆ. ಆದ್ದರಿಂದ ಗ್ಯಾರಂಟಿಯಿಂದ ಕೊಂಚ ಜೀವಕಳೆ ತುಂಬಿರುವ ಮಧ್ಯಮ ವರ್ಗದವರ ಬದುಕಿಗೆ ಬೆಲೆಯೇರಿಕೆ ದೊಡ್ಡ ಆಘಾತವೇ ನೀಡಿರುವುದಂತೂ ಸುಳ್ಳಲ್ಲ.

Social Icons