ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ದುಡ್ಡು ಕದಿಯದಂತೆ ಮಾಡಲು ಹೀಗೆ ಮಾಡಿ| Biometric Lock

ಈಗ ಎಲ್ಲವೂ ಡಿಜಿಟಲ್ ದುನಿಯಾ. ಎಲ್ಲವೂ ಕೈಯ ಅಂಗೈಯೊಳಗಿರುವ ಮೊಬೈಲ್ ನ ಮೂಲಕವೇ ನಿಯಂತ್ರಿಸಲ್ಪಡುತ್ತಿದೆ. ಡಿಜಿಟಲ್ ಇಂಡಿಯಾ ಪರಿಕಲ್ಪನೆ ಬಹಳಷ್ಟು ಕ್ರಾಂತಿಕಾರಕ ನಡೆಯಾಗಿದ್ದರೂ ಅದರಲ್ಲಿ ಅಷ್ಟೇ ಅಪಾಯ ಕೂಡ ಇದೆ. ಎಲ್ಲೋ ಅಗೋಚರವಾಗಿ ಕುಳಿತಿರುವವರು ನಮ್ಮ ಖಾತೆಗೆ ಕನ್ನಹಾಕಿ ನಮಗರಿವಿಲ್ಲದಂತೆಯೇ ನಮ್ಮ ಖಾತೆಯ ಹಣವನ್ನು ಎಗರಿಸಿಬಿಡುತ್ತಾರೆ. ನಮ್ಮ ಖಾತೆಯನ್ನು ಹ್ಯಾಕ್ ಮಾಡಲು ಹೇಗೆ ಸಾಧ್ಯವಾಗುತ್ತದೆ ಎನ್ನುವ ಪ್ರಶ್ನೆಗೆ ಒಂದು ಉತ್ತರ ಆಧಾರ್ ಕಾರ್ಡ್. ಹೌದು.ಆಧಾರ್ ಸಂಖ್ಯೆ ಇದ್ದರೆ ಸಾಕು ಈಗ ಬ್ಯಾಂಕ್ ಖಾತೆ ಹಣವನ್ನು ಲೂಟಿ ಮಾಡುವ ಹಂತಕ್ಕೆ ಡಿಜಿಟಲ್ ಹ್ಯಾಕರ್‌ಗಳು ಬುದ್ಧಿವಂತರಾಗಿದ್ದಾರೆ. ಹಾಗಿದ್ದಾಗ ಇಲ್ಲಿ ನಮ್ಮ ಸುರಕ್ಷತೆಗೆ ಇರುವ ಉಪಾಯ ಎಂದರೆ ಅದು ಆಧಾರ್ ಕಾರ್ಡ್ ನ ಬಯೋಮೆಟ್ರಿಕ್ ಲಾಕ್‌.



ನಾವು ಆಧಾರ್ ಕಾರ್ಡ್‌ ಮಾಡಿಸುವಾಗ ನಮ್ಮ ಬಯೋಮೆಟ್ರಿಕ್ ನ್ನು ನೀಡಿರುತ್ತೇವೆ. ಕಣ್ಣುಗಳ ಐರಿಸ್‌ ಅನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಹಾಗೆಯೇ ಕೈ ಬೆರಳುಗಳ ಗುರುತು ಪಡೆಯಲಾಗಿದೆ. ಹಾಗೆಯೇ ನಿಮ್ಮ ಫೋಟೋವನ್ನು ತೆಗೆದುಕೊಳ್ಳಲಾಗಿದೆ. ನಿಮ್ಮ ವೈಯಕ್ತಿಕ ವಿವರಗಳ ಜತೆಗೆ ಈ ಎಲ್ಲ ದೈಹಿಕ ಗುರುತುಗಳು ನಿಮ್ಮ ಆಧಾರ್‌ ನಂಬರ್‌ನಲ್ಲಿ ಇವೆ. ಜತೆಗೆ ಈ ಆಧಾರ್ ಕಾರ್ಡ್ ನಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಕೂಡ ಆಗಿದೆ. ಹೀಗಿದ್ದಾಗ ವಂಚಕರಿಗೆ ಎಲ್ಲಾ ಡೇಟಾವೂ ಒಂದೆಡೆಯೇ ಸಿಗುವ ಅವಕಾಶ ನಿರ್ಮಿಸಿಕೊಟ್ಟಂತಾಗಿದೆ.

ಇದರ ದುರುಪಯೋಗ ಹೇಗೆ ಆಗುತ್ತಿದೆ ಎಂದರೆ ಎಲ್ಲೋ ಕುಳಿತಿರುವ ಖದೀಮರು ಜನರ ಡಿಜಿಟಲ್‌ ಡಾಟಾವನ್ನು ಕದಿಯುವ ಹಂತವನ್ನು ಮೀರಿ, ಈಗ ಜಸ್ಟ್‌ ಆಧಾರ್ ನಂಬರ್ ಬಳಸಿಯೂ ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ಲೂಟಿ ಮಾಡಲು ಮುಂದಾಗುತ್ತಿದ್ದಾರೆ. ಈಗ ಒಟಿಪಿ ಪಡೆದು ವಂಚನೆ, ಲಿಂಕ್ ಕಳುಹಿಸಿ ವಂಚಿಸುವ ಜಾಲಗಳ ಬಗ್ಗೆ ಜನರು ಜಾಗೃತರಾಗಿದ್ದಾರೆ. ಹೀಗಾಗಿ ಕೇವಲ ಆಧಾರ್‌ ಸಂಖ್ಯೆ ಬಳಸಿಕೊಂಡು, ಯಾವುದೇ ಓಟಿಪಿ ಪಡೆಯದೇ ಹ್ಯಾಕರ್‌ಗಳು ಹಣ ಕದಿಯಬಲ್ಲವರಾಗಿದ್ದಾರೆ. ಹ್ಯಾಕರ್‌ಗಳು ಆಧಾರ್ ಬಳಕೆದಾರರ ಬ್ಯಾಂಕ್‌ ಖಾತೆಗೆ ಕನ್ನ ಹಾಕಬಾರದು, ಯಾವುದೇ ಡಾಟಾ ಕದಿಯಬಾರದು ಎಂದರೆ ಇರುವ ಒಂದೇ ಆಯ್ಕೆ ಎಂದರೆ ಅದೇ ' ಬಯೋಮೆಟ್ರಿಕ್ ಲಾಕ್‌' ಮಾಡುವುದು. ಹೀಗೆ ಮಾಡುವುದರಿಂದ ಯಾರು ಸaಹ ನಿಮ್ಮ ಆಧಾರ್ ಅನ್ನು ಅನಧಿಕೃತವಾಗಿ, ಕಾನೂನು ಬಾಹಿರವಾಗಿ ಯಾವುದಕ್ಕೇ ಬಳಕೆ ಮಾಡಲು ಸಾಧ್ಯವಿಲ್ಲ ಎನ್ನುವುದು ಸೈಬರ್ ತಜ್ಞರ ಅಭಿಪ್ರಾಯ.

ಹಾಗಿದ್ದಾಗ ಆಧಾರ್ ಕಾರ್ಡಿನ ಬಯೋಮೆಟ್ರಿಕ್ ಲಾಕ್ ಹೇಗೆ ಮಾಡಬಹುದು ಎನ್ನುವುದನ್ನು ತಿಳಿಯೋಣ ಬನ್ನಿ.

  • ನಿಮ್ಮ ಸ್ಮಾರ್ಟ್‌ಫೋನ್‌, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಗೂಗಲ್‌ ಅಪ್ಲಿಕೇಶನ್‌ ಓಪನ್ ಮಾಡಿ.
  • ಸರ್ಚ್‌ ಬಾರ್‌ನಲ್ಲಿ 'My Aadhar' ಎಂದು ಟೈಪ್ ಮಾಡಿ ಎಂಟರ್ ಮಾಡಿ.
  • ಈಗ ತೆರೆದುಕೊಳ್ಳುವ ವೆಬ್‌ಪೇಜ್‌ಗಳ ಪೈಕಿ ಮೊದಲ ವೆಬ್‌ ಲಿಂಕ್ ಅಂದರೆ 'https://myaadhaar.uidai.gov.in/login' ನ್ನು ಕ್ಲಿಕ್ ಮಾಡಿ.
  • ಈಗ ಮೈ ಆಧಾರ್ ವೆಬ್‌ಸೈಟ್‌ ಪೇಜ್ ತೆರೆಯುತ್ತದೆ. ಇಲ್ಲಿ ' Login' ಎಂದಿರುವಲ್ಲಿ ಕ್ಲಿಕ್ ಮಾಡಿ.
  • ನಂತರ ಮತ್ತೊಂದು ವೆಬ್‌ಪುಟ ತೆರೆಯುತ್ತದೆ.
  • - ಇಲ್ಲಿ Enter Aadhaar Number ಎಂದಿರುವಲ್ಲಿ ನಿಮ್ಮ ಆಧಾರ್ ಸಂಖ್ಯೆ ಟೈಪಿಸಿ.
  • Enter Captcha ಎಂದಿರುವಲ್ಲಿ ಪಕ್ಕದ ಬಾಕ್ಸ್‌ನಲ್ಲಿರುವ ಅಕ್ಷರಗಳನ್ನು ಟೈಪಿಸಿ.
  • ನಂತರ 'Login With OTP' ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಈಗ ನಿಮ್ಮ ರಿಜಿಸ್ಟರ್‌ ಮೊಬೈಲ್‌ ನಂಬರ್‌ಗೆ 6 ಸಂಖ್ಯೆಯ ಒಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಿ
  • ಆಗ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. 'Update My Aadhar section' ಗೆ ಭೇಟಿ ನೀಡಿ.
  • ಇಲ್ಲಿ 'Lock / Unlock Biometrics ಎಂದಿರುವಲ್ಲಿ ಕ್ಲಿಕ್ ಮಾಡಿ.
  • ಈಗ ಮತ್ತೆ ನಿಮಗೆ ಆಧಾರ್ ನಂಬರ್ ಮತ್ತು ಓಟಿಪಿ ಕೇಳಲಾಗುತ್ತದೆ. ಅದನ್ನು ಎಂಟರ್ ಮಾಡಬೇಕು.
  • ಈಗ ಲಾಕ್ ಮಾಡಲು 'Lock Biometrics' ಎಂದಿರುವಲ್ಲಿ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಬಯೋಮೆಟ್ರಿಕ್ ಮಾಹಿತಿಗಳು ಲಾಕ್‌ ಆಗುತ್ತವೆ.

ಮತ್ತೆ ನಿಮಗೆ ಎಂದಾದರೂ ಆಧಾರ್ ಬಯೋಮೆಟ್ರಿಕ್ ಲಾಕ್‌ ಬೇಡ ಎಂದರೆ ನೀವೆ ಇದೇ ಮಾದರಿಯಲ್ಲಿ ಫಾಲೋ ಮಾಡಿ ' Unlock Biometric / Disable the Locking system' ಆಯ್ಕೆ ಮಾಡಿ, ಬಯೋಮೆಟ್ರಿಕ್ ಅನ್‌ಲಾಕ್‌ ಮಾಡಿಕೊಳ್ಳಬಹುದು. ಈ ಮೂಲಕ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಸುಲಭದಲ್ಲಿ ಸಂರಕ್ಷಿಸಿಕೊಳ್ಳಬಹುದು.

ಆಧಾರ್ ಬಯೋಮೆಟ್ರಿಕ್ ಲಾಕ್‌ ಮಾಡುವುದರಿಂದ ಹೇಗೆ ಸುರಕ್ಷತೆ ದೊರೆಯುತ್ತದೆ ಎಂದರೆ, ಬಯೋಮೆಟ್ರಿಕ್ ಲಾಕ್‌ ಆದರೆ ಹ್ಯಾಕರ್‌ಗಳು ನಿಮ್ಮ ಯಾವುದೇ ಮಾಹಿತಿಗಳು ಇದ್ದರೂ ಸಹ ಏನು ಮಾಡಲು ಸಾಧ್ಯವಾಗುವುದಿಲ್ಲ. ಆಧಾರ್ ಹೊಂದಿರುವವರು ಮುಂದೆ ಯಾವುದೇ ಬಯೋಮೆಟ್ರಿಕ್‌ ಪ್ರಮಾಣೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಈ ಮೂಲಕ ನಮ್ಮ ಮಾಹಿತಿಗಳು ಕಳ್ಳರ ಪಾಲಾಗುವುದು ತಪ್ಪಿದಂತಾಗುತ್ತದೆ.