ವರದಿ: ಪ್ರಕಾಶ್ ಕೋಡಿಂಬಾಳ
ಸುಳ್ಯ: ಬೆಳ್ಳಾರೆಯ ಎಪಿಎಂಸಿ ಮಾರುಕಟ್ಟೆಯ ಬಳಿ ಮಹಿಳೆಯ ಕೊಲೆ ಮಾಡಿದ ಪ್ರಕರಣದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬೆಳ್ಳಾರೆಯ ಪಾಟಾಜೆಯ ನಳಿನಿ ಎಂಬವರನ್ನು ಭಾನುವಾರ ರಾತ್ರಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದ್ದು, ಆರೋಪಿ ಕಲ್ಲಡ್ಕ ಜೋಗಿಯಡ್ಕದ ಜಯರಾಮ ನಾಯ್ಕ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಬೆಳ್ಳಾರೆ ಗ್ರಾಮದ ಪಾಟಾಜೆ ನಿವಾಸಿ ಸುಂದರ ಎಂಬವರ ಪತ್ನಿ ನಳಿನಿ (55) ಅವರನ್ನು ಭಾನುವಾರ ರಾತ್ರಿ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ನಳಿನಿ ಅವರು ಎರಡು ವರ್ಷಗಳ ಹಿಂದೆ ಮನೆ ಬಿಟ್ಟಿದ್ದರು. ವಾರಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದ ಅವರು ಬಸ್ ತಂಗುದಾಣ ಮತ್ತಿತರ ಕಡೆಗಳಲ್ಲಿ ಮಲಗುತ್ತಿದ್ದರು. ಅದೇ ರೀತಿ ಮದ್ಯ ವ್ಯಸನಿಯಾಗಿದ್ದ ಜಯರಾಮ ನಾಯ್ಕ ಅವರು ಕೂಡ ಮನೆ ಬಿಟ್ಟಿದ್ದರು. ಬಸ್ಸು ತಂಗುದಾಣ, ಮಾರುಕಟ್ಟೆ ಸೇರಿದಂತೆ ರಾತ್ರಿ ತಂಗುತ್ತಿದ್ದರು. ಕೊಲೆ ನಡೆದ ದಿನ ನಳಿನಿ ಮತ್ತು ಆರೋಪಿ ಜಯರಾಮ ಬೆಳ್ಳಾರೆಯ ಎಪಿಎಂಸಿ ಮಾರುಕಟ್ಟೆ ಯಲ್ಲೇ ರಾತ್ರಿ ತಂಗಿದ್ದರು. ಮಧ್ಯರಾತ್ರಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತೆನ್ನಲಾಗಿದ್ದು, ಈ ವೇಳೆ ಆರೋಪಿ ಕುಡಿತದ ಅಮಲಿನಲ್ಲಿ ಎದುರಿದ್ದ ಕಲ್ಲನ್ನು ತಂದು ಆಕೆಯ ಮೇಲೆ ಎತ್ತಿ ಹಾಕಿ ಬಳಿಕ ಅಲ್ಲೇ ಮಲಗಿದ್ದರು.
ಆರೋಪಿ ಜಯರಾಮ ನಾಯ್ಕ ಬೆಳಗ್ಗೆ ಎದ್ದು ನೋಡಿದಾಗ ಮಹಿಳೆ ಮೃತಪಟ್ಟಿರುವ ಬಗ್ಗೆ ತಿಳಿ ದಿದೆ. ಬಳಿಕ ಆರೋಪಿ ಪರಾರಿಯಾಗಿದ್ದ. ಪೊಲೀಸರು ಮಂಗಳವಾರ ಜೋಗಿಯಡ್ಕ ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಬೆಳ್ಳಾರೆ ಎಸ್‌ಐ ಸಂತೋಷ್ ಬಿ.ಪಿ. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Social Icons