Bellare: ಕಲ್ಲಿನಿಂದ ಜಜ್ಜಿ ಕೊಲೆ ಮಾಡಲ್ಪಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ


ವರದಿ: ಪ್ರಕಾಶ್ ಕೋಡಿಂಬಾಳ

ಬೆಳ್ಳಾರೆ: ಕಲ್ಲಿನಿಂದ ತಲೆ, ಮುಖವನ್ನು ಜಜ್ಜಿ ಕೊಲೆ ಮಾಡಲ್ಪಟ್ಟ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹವು ಬೆಳ್ಳಾರೆಯ ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ಪತ್ತೆಯಾಗಿದೆ. 

ಮೃತಪಟ್ಟಿರುವ ಮಹಿಳೆಯನ್ನು ಬೆಳ್ಳಾರೆ ಗ್ರಾಮದ ನಿವಾಸಿಯಾಗಿದ್ದ ನಳಿನಿ ಪಾಟಾಜೆ ಎಂದು ಗುರುತಿಸಲಾಗಿದೆ. ಹೊಟೆಲ್ ಹಾಗೂ ಇತರ ಕಡೆ ಕೂಲಿ ಕೆಲಸ ಮಾಡಿಕೊಂಡಿದ್ದ ಮಹಿಳೆ ರಾತ್ರಿ ಮನೆಗೆ ಹೋಗದೆ ಮದ್ಯ ಸೇವನೆ ಮಾಡಿ ಬೆಳ್ಳಾರೆ ಎ.ಪಿ.ಎಂ.ಸಿ ಸಂತೆ ಮಾರುಕಟ್ಟೆಯಲ್ಲಿ ಮಲಗಿದ್ದರು. ರಾತ್ರಿ ಯಾರೋ ತಲೆಗೆ ಕಲ್ಲು ಎತ್ತಿ ಹಾಕಿ ಕೊಂದಿರುವಂತೆ ಕಂಡುಬಂದಿದೆ. ಮೃತದೇಹದ ತಲೆ ಒಡೆದು ರಕ್ತ ಹರಿದುಹೋಗಿದೆ. ಮೃತದೇಹದ ಪಕ್ಕ ಕೆಂಪುಕಲ್ಲೊಂದು ಪತ್ತೆಯಾಗಿದೆ. ಕಲ್ಲಿನಲ್ಲಿ ರಕ್ತದ ಕಲೆಗಳು ಕೂಡ ಕಂಡುಬಂದಿದ್ದು, ಇದೇ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.