Bantwal: ಪರಿಸರ ದಿನ ಆಚರಣೆಗೆ ಸಿಮಿತವಾಗದೇ ನಿತ್ಯ ಮರಗಿಡ ಪೋಷಿಸುವಂತಾಗಬೇಕು : ಪ್ರಫುಲ್ ಶೆಟ್ಟಿ



ವರದಿ: ಹರೀಶ್ ಮಾಂಬಡಿ

ಬಂಟ್ವಾಳ: ಪರಿಸರ ದಿನಾಚರಣೆ ಕಾರ್ಯಕ್ರಮ ಮಾಡುವ ಮೂಲಕ ಪರಿಸರವನ್ನು ಉಳಿಸಿ,ಬೆಳೆಸುವಂತ ಕೆಲಸವಾಗಬೇಕು. ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸಿಮಿತವಾಗದೆ ಪ್ರತಿದಿನವು ಪರಿಸರವನ್ನು ಪೋಷಿಸುವಂತ ಕೆಲಸ ಆಗಬೇಕು.ಜಗದ ಪ್ರತಿಯೊಬ್ಬನಿಗೂ ಪರಿಸರ ಅತ್ಯಮೂಲ್ಯ ಮತ್ತು ಅತ್ಯಗತ್ಯ. ಎಂದು ಬಂಟ್ವಾಳದ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಹೇಳಿದರು.


ಅವರು ಜೂ.9ರ ಭಾನುವಾರ ಪೆರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಮಾಣಿ ಯುವವಾಹಿನಿಘಟಕ ಆತಿಥ್ಯದಲ್ಲಿ ಬಂಟ್ವಾಳ  ವಲಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಡೆದ "ಹಸಿರು ವನ --  ಸಂತೃಪ್ತ ಮನ" ಹಾಗೂ "ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮೋನಪ್ಪ ಸಾಲ್ಯಾನ್ ಕಾರ್ಯಕ್ರಮದ ಉದ್ಘಾಟಿಸಿ ಶುಭಹಾರೈಸಿದರು. 

ಯುವವಾಹಿನಿ ಘಟಕದ ಗೌರವ ಸಲಹೆಗಾರ ನಾರಾಯಣ ಸಾಲ್ಯನ್  ಅತಿಥಿಗಳಾಗಿ ಭಾಗವಹಿಸಿ ಪರಿಸರವನ್ನು ಉಳಿಸಿ ಬೆಳೆಸುವಂತ ಕರ್ತವ್ಯ ನಮ್ಮ ಮೇಲಿದೆ, ಎಲ್ಲರು ಒಟ್ಟುಗೂಡಿ ಪರಿಸರವನ್ನು ಸಂರಕ್ಷಿಸುವ ಎಂದು ಹೇಳಿದರು. 

ಪುಸ್ತಕ ವಿತರಣೆ

ಶಾಲೆಯ ಒಂದನೇ ತರಗತಿಯಿಂದ ಏಳನೆ ತರಗತಿಯವರೆಗಿನ ಮಕ್ಕಳಿಗೆ ಉಚಿತವಾಗಿ ಘಟಕದ ವತಿಯಿಂದ ಪುಸ್ತಕ ವಿತರಿಸಲಾಯಿತು ಹಾಗೂ ಮಕ್ಕಳಿಗೆ ಮತ್ತು ಮಕ್ಕಳ ಪೋಷಕರಿಗೆ ಗಿಡ ನೀಡಲಾಯಿತು. ಯುವ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ಕೊಂಕಣಪದವು ಕಾರ್ಯಕ್ರಮಕ್ಕೆ ಸಹಕರಿಸಿದ ಶಾಲಾಭಿವೃದ್ಧಿ ಸಮಿತಿಗೆ,ಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಬಂಟ್ವಾಳ ಉಪವಲಯ ಅರಣ್ಯಾಧಿಕಾರಿ ರವಿರಾಜ್ ಬಿ, ಪೆರಾಜೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ  ಕುಶಾಲಪ್ಪ ಎಂ ಪೆರಾಜೆ,ಘಟಕದ ಸಮಾಜ ಸೇವಾ ನಿರ್ದೇಶಕ ಸತೀಶ್ ಬಾಬಣಕಟ್ಟೆ ಉಪಸ್ಥಿತರಿದ್ದರು.

 ಶಾಲಾ ವಠಾರದಲ್ಲಿ ಗಿಡವನ್ನು ನೆಡಲಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳು,ಶಿಕ್ಷಕಿಯರು, ಮಕ್ಕಳ ಪೋಷಕರು, ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರು, ನಿರ್ದೇಶಕರು,ಸದಸ್ಯರು ಪಾಲ್ಗೊಂಡಿದ್ದರು.


ಘಟಕದ ಸದಸ್ಯೆ ಪ್ರಜ್ಞಾ ಎಂ ಪ್ರಾರ್ಥಿಸಿದರು,ಶಾಲೆಯ ಮುಖ್ಯಾ ಶಿಕ್ಷಕಿ ಯಶೋದಾ ಸ್ವಾಗತಿಸಿದರು,ಘಟಕದ ಕಾರ್ಯದರ್ಶಿ ಶಾಲಿನಿ  ಜಗದೀಶ್  ವಂದಿಸಿದರು,ಮಾಜಿ ಕಾರ್ಯದರ್ಶಿ ಸಚಿನ್ ಪೆರಾಜೆ  ಕಾರ್ಯಕ್ರಮ ನಿರೂಪಿಸಿದರು.