ಅಯೋಧ್ಯೆ: ಕಾಮಗಾರಿ ಸಂಪೂರ್ಣ ಪೂರ್ಣಗೊಳ್ಳದಿದ್ದರೂ ಜನವರಿ 22ರಂದು ತರಾತುರಿಯಲ್ಲಿ ಲೋಕಾರ್ಪಣೆಗೊಂಡಿದ್ದ ಅಯೋಧ್ಯೆಯ ಶ್ರೀರಾಮಮಂದಿರದ ಗರ್ಭಗುಡಿಯಲ್ಲಿ ಮಳೆ ನೀರು ಸೋರಿಕೆ ಆಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಎರಡು ದಿನಗಳ ಹಿಂದೆ ಶನಿವಾರ ರಾತ್ರಿ ಸುರಿದ ಮೊದಲ ಮಳೆಗೇ ಸೋರಿಕೆ ಆಗಿದೆ ಎಂಬುದನ್ನು ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ ಖಚಿತಪಡಿಸಿದ್ದಾರೆ.
ಶ್ರೀಬಾಲರಾಮನ ವಿಗ್ರಹದ ಮುಂದೆ ಅರ್ಚಕರು ಕುಳಿತುಕೊಳ್ಳುವ ಸ್ಥಳದಲ್ಲೇ ಮಳೆ ನೀರು ಸೋರಿಕೆಯಾಗುತ್ತಿದೆ. ಅಲ್ಲದೆ ವಿಐಪಿ ದರ್ಶನಕ್ಕಾಗಿ ಜನರು ಬರುವ ಸ್ಥಳದಲ್ಲಿಯೂ ನೀರು ಸೋರಿಕೆಯಾಗುತ್ತಿದೆ. ದೇಶದ ಮೂಲೆಮೂಲೆಗಳಿಂದ ಆಯ್ದ ಇಂಜಿನಿಯರ್‌ಗಳು ನಿರ್ಮಿಸಿದ ರಾಮಮಂದಿ ಸೋರುತ್ತಿರುವುದು ಬಹಳ ಅಚ್ಚರಿ ಮೂಡಿಸುತ್ತಿದೆ. ಮಳೆ ಬಂದರೆ ಛಾವಣಿ ಸೋರಲಿದೆ ಎಂದು ಒಬ್ಬರಿಗೂ ತಿಳಿಯಲಿಲ್ಲ. ವಿಶ್ವ ಪ್ರಸಿದ್ಧ ದೇವಸ್ಥಾನದ ಛಾವಣಿ ಸೋರುತ್ತಿರುವುದು ಅಚ್ಚರಿಯ ವಿಷಯ. ಇದು ಏಕೆ ಆಯಿತು? ಅಷ್ಟು ದೊಡ್ಡ ಇಂಜಿನಿಯರ್‌ಗಳ ಹಾಜರಿಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ದೊಡ್ಡ ತಪ್ಪು" ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರದಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಮಂದಿರ ನಿರ್ವಹಣಾ ಸಿಬ್ಬಂದಿ ಗರ್ಭಗುಡಿಯ ಮೇಲ್ಛಾವಣಿಯ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ. ಸೋರಿಕೆಯಾಗಿರುವುದನ್ನು ದೃಢಪಡಿಸಿರುವ ಮಂದಿರ ನಿರ್ಮಾಣ ಉಸ್ತುವಾರಿ ಹೊತ್ತಿದ್ದ ನೃಪೇಂದ್ರ ಮಿಶ್ರಾ, "ಗುರು ಮಂಟಪ ಇರುವ ಮೊದಲ ಮಹಡಿಗೆ ಯಾವುದೇ ಮೇಲ್ಛಾವಣಿಯಿಲ್ಲ. ಆದ್ದರಿಂದ ಮಳೆ ನೀರು ತುಂಬಿಕೊಂಡು ಗರ್ಭಗುಡಿಯ ಮೂಲಕ ಸೋರಿಕೆಯಾಗಿದೆ. ಶೀಘ್ರವೇ ದುರಸ್ತಿ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ರಾಮ ಮಂದಿರದ ಮೊದಲ ಮಹಡಿಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದು ಈ ವರ್ಷದ ಜುಲೈ ವೇಳೆಗೆ ಅಂತ್ಯಗೊಳ್ಳಲಿದೆ. ಡಿಸೆಂಬರ್ ಕೊನೆಗೆ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮೇಲ್ಛಾವಣಿಯನ್ನು ತುರ್ತು ದುರಸ್ತಿಗೊಳಿಸಲು ಮತ್ತು ಅದನ್ನು ವಾಟರ್‌ಫೂಫ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

Social Icons