Amazonನಲ್ಲಿ ಐಟಮ್ ಬದಲಿಗೆ ಬಂತು ಜೀವಂತ ಹಾವು| ಬೆಚ್ಚಿಬಿದ್ದ ದಂಪತಿ

ಬೆಂಗಳೂರು: ಈಗ ಏನಿದ್ದರೂ ಆನ್‍ಲೈನ್ ಶಾಪಿಂಗ್ ಟ್ರೆಂಡ್. ಏನು ಬೇಕಾದರೂ ಕುಳಿತಲ್ಲೇ ಅಂಗೈನಲ್ಲಿರೋ ಮೊಬೈಲ್‍ನಲ್ಲಿ ಆರ್ಡರ್ ಮಾಡಿ ತೆಗೆದುಕೊಳ್ಳಬಹುದಾಗಿದೆ. ನಾವು ಆರ್ಡರ್ ಮಾಡಿದ ವಸ್ತು ನಮ್ಮ ಕೈಸೇರಿದ ನಂತರ ಅದನ್ನು ಒಮ್ಮೆ ತೆಗೆದು ಪರಿಶೀಲಿಸುತ್ತೇವೆ. ಕೆಲವೊಮ್ಮೆ ಬೇರೆ ವಸ್ತು ಬಂದಿರುತ್ತದೆ. ಇನ್ನೂ ಕೆಲವೊಮ್ಮೆ ವಸ್ತುವಿನ ಕ್ವಾಲಿಟಿ ಚೆನ್ನಾಗಿರುವುದಿಲ್ಲ ಎಂಬ ಕಾರಣಕ್ಕೆ ಹಿಂತಿರುಗಿಸುತ್ತೇವೆ. ಆದರೆ, ಇವೆಲ್ಲವೂ ಜೀವರಹಿತ ವಸ್ತುಗಳಾಗಿರುತ್ತವೆ. ಹೀಗೆ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ಬಾಕ್ಸ್‍ನಲ್ಲಿ ಆರ್ಡರ್ ಮಾಡಿದ ವಸ್ತುವಿನ ಬದಲು ಹಾವು ಬಂದರೆ ಹೇಗಾಗಬಹುದು ಹೇಳಿ? ಈಗ ಅಂತಹ ಘಟನೆಯೂ ನಡೆದಿದೆ.



 ಹೌದು, ಆನ್‍ಲೈನ್ ಶಾಪಿಂಗ್ ವೆಬ್‍ಸೈಟ್ ಅಮೆಜಾನ್‍ನಲ್ಲಿ ವಿಡಿಯೋ ಗೇಮ್ ಸಾಧನ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಕೊರಿಯರ್ ಬಾಕ್ಸ್‍ನ ಜತೆಗೆ ವಿಷಕಾರಿ ಹಾವು ಬಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸರ್ಜಾಪುರ ನಿವಾಸಿಗಳಾದ ದಂಪತಿಗಳು ಆನ್‍ಲೈನ್ ಶಾಪಿಂಗ್ ದೈತ್ಯ ಅಮೆಜಾನ್‍ನಲ್ಲಿ ಎಕ್ಸ್‍ಬಾಕ್ಸ್ ಕಂಟ್ರೋಲರ್ ಬುಕ್ ಮಾಡಿದ್ದಾರೆ. ಪಾರ್ಸೆಲ್ ತೆರೆಯುತ್ತಿದ್ದಂತೆ ಅದರಲ್ಲಿ ಅವರಿಗೆ ಬೇಕಿದ್ದ ಐಟಮ್‍ನ ಬದಲಿಗೆ ಹಾವು ಕಾಣಿಸಿಕೊಂಡಿದೆ. ಸಾಫ್ಟ್‍ವೇರ್ ಉದ್ಯೋಗದಲ್ಲಿರುವ ಈ ದಂಪತಿ ವಾರದ ಹಿಂದೆ ಅಮೆಜಾನ್‍ನಲ್ಲಿ ಎಕ್ಸ್‍ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದರು. ಅದರಂತೆ ಪಾರ್ಸೆಲ್ ಮನೆ ಬಾಗಿಲಿಗೆ ಬಂದು ತಲುಪಿದೆ. ಪಾರ್ಸೆಲ್ ಓಪನ್ ಮಾಡುತ್ತಿದ್ದಂತೆ ಅದರೊಳಗೆ ಎಕ್ಸ್‍ಬಾಕ್ಸ್ ಕಂಟ್ರೋಲರ್ ಬದಲಾಗಿ ನಾಗರಹಾವು ಎಡೆ ಎತ್ತಿ ನಿಂತಿರುವುದನ್ನು ಕಂಡು ದಂಗಾಗಿದ್ದಾರೆ. ಹಾವನ್ನು ಕಂಡು ಕೂಡಲೇ ಬಾಕ್ಸ್ ಮುಚ್ಚಿರುವ ದಂಪತಿ ತಮಗಾದ ಅನುಭವವನ್ನು ವಿಡಿಯೋ ಸಂದೇಶದ ಮೂಲಕ ಹಂಚಿಕೊಂಡಿದ್ದಾರೆ.



 ಹಾವನ್ನು ನೋಡಿ ಬೆಚ್ಚಿಬಿದ್ದ ದಂಪತಿಯು ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ  ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಕೊರಿಯರ್ ಬಾಕ್ಸ್ ಒಳಗೆ ಇದ್ದ ಗಮ್ ಟೇಪ್‍ಗೆ ಈ ಹಾವು ಸಿಕ್ಕಿಕೊಂಡಿತ್ತು. ಹೀಗಾಗಿ, ಅದು ಹೊರಗೆ ಬರುವುದಕ್ಕೆ ಸಾಧ್ಯವಾಗಿಲ್ಲ. ಇನ್ನು ವಿಷಕಾರಿ ಹಾವಾಗಿದ್ದು, ಗಮನವಿಟ್ಟು ನೋಡಿದ ಕಾರಣ ಅಪಾಯದಿಂದ ಪಾರಾದೆ ಎಂದು ಗ್ರಾಹಕರು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿ ಎಂದು ಸಲಹೆ ನೀಡಿದ್ದಾರೆ. ಜತೆಗೆ ಅಮೆಜಾನ್ ಸೇವೆಯ ಬಗ್ಗೆಯೂ ಕಿಡಿಕಾರಿದ್ದಾರೆ.

 ಪೋಸ್ಟ್ ಸಖತ್ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಕಂಪನಿ ಸ್ಪಷ್ಟನೆ ನೀಡಿದೆ. ತನ್ವಿ ಅವರ ಟ್ವೀಟ್‍ಗೆ ಅಮೆಜಾನ್ ಸಹಾಯ ಕೇಂದ್ರ ಪ್ರತಿಕ್ರಿಯೆ ನೀಡಿದ್ದು, ಕ್ಷಮೆ ಕೋರಿದೆ. ದಂಪತಿಗೆ ಎಕ್ಸ್ ಬಾಕ್ಸ್‍ನ ಸಂಪೂರ್ಣ ಹಣವನ್ನು ವಾಪಸ್ ನೀಡಿದ್ದಾರೆ. ಆದರೆ, ಆ ಪಾರ್ಸೆಲ್‍ನೊಳಗೆ ಹಾವು ಹೇಗೆ ಸೇರಿಕೊಂಡಿತ್ತು ಎಂಬುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ತಪ್ಪಾಗಿ ಪಾರ್ಸೆಲ್ ಬಂದಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೊಂಡಿದೆ. ಆದರೆ ಪಾರ್ಸೆಲ್ ಒಳಗಡೆ ಜೀವಂತ ಹಾವು ಹೇಗೆ ಬಂತು ಎಂಬುದು ಸದ್ಯ ಪ್ರಶ್ನೆಯಾಗಿ ಉಳಿದಿದೆ. ಒಟ್ಟಿನಲ್ಲಿ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.