ಚಿಕ್ಕಮಗಳೂರು: ವಿದ್ಯುತ್ ತಗುಲಿ‌ ಬಾಲಕ ಮೃತ್ಯು - ವಸತಿ ಶಾಲೆಯ ಪ್ರಾಂಶುಪಾಲ ಸಹಿತ 8ಮಂದಿ‌ ಅಮಾನತು



ಚಿಕ್ಕಮಗಳೂರು: ಇಲ್ಲಿನ ಕುಪ್ಪಾಳು ಗ್ರಾಮದಲ್ಲಿರುವ ವಸತಿ ಶಾಲೆಯ ಆವರಣದಲ್ಲಿದ್ದ ಮರಕ್ಕೆ ನೇರಳೆ ಹಣ್ಣು ಕೀಳಲು ಹೋಗಿದ್ದ ಶಾಲಾ ಬಾಲಕ ನಿಯಂತ್ರಣ ತಪ್ಪಿ ಕೆಳಗೆ ಬೀಳುವ ಸಂದರ್ಭ ವಿದ್ಯುತ್‌ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಇದೀಗ ಘಟನೆಗೆ ಸಂಬಂಧಿಸಿದಂತೆ ವಸತಿ ಶಾಲೆಯ ಪ್ರಾಂಶುಪಾಲ, ನಿಲಯಪಾಲಕ ಸೇರಿದಂತೆ 8ಮಂದಿ ಸಿಬ್ಬಂದಿಯನ್ನು ನಿರ್ಲಕ್ಷ್ಯತನದ ಆರೋಪದ ಮೇರೆಗೆ ಅಮಾನತುಗೊಳಿಸಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕರು ಆದೇಶಿಸಿದ್ದಾರೆ.

ಕುಪ್ಪಾಳು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕಾಶ್(13) ಮೃತಪಟ್ಟ ಬಾಲಕ. ಈತ ಶನಿವಾರ ಶಾಲೆ ಬಿಟ್ಟ ಬಳಿಕ ತನ್ನಿಬ್ಬರು ಸಹಪಾಠಿಗಳೊಂದಿಗೆ ವಸತಿ ಶಾಲೆ ಆವರಣದಲ್ಲಿಯೇ ಇದ್ದ ನೇರಳೆ ಹಣ್ಣಿನ ಮರ ಏರಿ ಹಣ್ಣು ಕೀಳಲು ಮುಂದಾಗಿದ್ದಾಗಿದ್ದಾನೆ. ಮರ ಹತ್ತಿ ಹಣ್ಣು ಕೀಳುತ್ತಿದ್ದ ವೇಳೆ ಬಾಲಕ ಆಕಾಶ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಮರದಿಂದ ಬೀಳುತ್ತಿದ್ದ ಸಂದರ್ಭ ಮರದ ಪಕ್ಕದಲ್ಲೇ ಹಾದು ಹೋಗಿದ್ದ ವಿದ್ಯುತ್‌ ತಂತಿಯನ್ನು ಬಾಲಕ ಹಿಡಿದುಕೊಂಡಿದ್ದಾನೆ. ಈ ವೇಳೆ ಬಾಲಕನಿಗೆ ವಿದ್ಯುತ್‌ ಪ್ರವಹಿಸಿ ನಿತ್ರಾಣಗೊಂಡಿದ್ದಾನೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದಗೇ ಬಾಲಕ ಮೃತಪಟ್ಟಿದ್ದ.

ಬಾಲಕನ ಸಾವಿಗೆ ವಸತಿ ಶಾಲೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕನ ಸಂಬಂಧಿಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರವೀಣ್ ಬಿ ಬಾಗೇವಾಡಿ ಅವರು ಕುಪ್ಪಾಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ, ನಿಲಯಪಾಲಕ ಸೇರಿದಂತೆ 8 ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.