ಮೋದಿ - ರಾಹುಲ್ ಹಸ್ತಲಾಘವ : ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ 18ನೇ ಲೋಕಸಭೆ ಲ



ನವದೆಹಲಿ: ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ಅಪರೂಪದ ದೃಶ್ಯವೊಂದು ನಡೆದಿದೆ.

ಚುನಾವಣೆಗೂ ಮೊದಲು ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರು ಪರಸ್ಪರ ಟೀಕೆ ಮಾಡಿ ಒಬ್ಬರ ಮೇಲೊಬ್ಬರು ಟೀಕೆಗಳನ್ನು ಮಾಡುತ್ತಿದ್ದರು. ಚುನಾವಣೆಯ ಬಳಿಕವೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಟೀಕೆಗಳು ಹಾಗೆಯೇ ಮುಂದುವರಿದಿತ್ತು. ಆದರೆ ಲೋಕಸಭೆಯಲ್ಲಿ ಉಭಯ ನಾಯಕರು ಕೈ ಜೋಡಿಸಿದ್ದು ಅಚ್ಚರಿಗೆ ಕಾರಣವಾಯಿತು.

ಮೊದಲು ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಕಾಂಗ್ರೆಸ್ ಪ್ರಸ್ತಾವನೆಗೆ ಎನ್‌ಡಿಎ ಸರ್ಕಾರ ಒಪ್ಪಿರಲಿಲ್ಲ. ಇದರೊಂದಿಗೆ ಸ್ಪೀಕರ್ ಆಯ್ಕೆಗೆ ಇಂಡಿಯಾ ಮೈತ್ರಿಕೂಟ ಪರವಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅಂತಿಮವಾಗಿ ಎನ್‌ಡಿಎಯಿಂದ ನಾಮನಿರ್ದೇಶನಗೊಂಡ ಓಂ ಬಿರ್ಲಾ ಧ್ವನಿ ಮತದ ಮೂಲಕ ಸ್ಪೀಕರ್ ಆಗಿ ಆಯ್ಕೆಯಾದರು.

ಲೋಕಸಭೆಯಲ್ಲಿ ಸ್ಪೀಕರ್ ಆಯ್ಕೆ ವೇಳೆ ಅಪರೂಪದ ಘಟನೆ ನಡೆದಿದೆ. ಹಂಗಾಮಿ ಸ್ಪೀಕರ್ ಭರ್ತ್ರಿಹರಿ ಮಹತಾಬ್ ಅವರು ಓಂ ಬಿರ್ಲಾ ಅವರನ್ನು ಸ್ಪೀಕರ್ ಹುದ್ದೆಗೆ ತರುವಂತೆ ಕೇಳಿಕೊಂಡರು. ಇದರೊಂದಿಗೆ ಪ್ರಧಾನಿ ಮೋದಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಓಂ ಬಿರ್ಲಾ ಕುಳಿತಿದ್ದ ಆಸನಕ್ಕೆ ತೆರಳಿ ಅಭಿನಂದಿಸಿ ಸ್ಪೀಕ‌ರ್ ಆಸನಕ್ಕೆ ಕರೆದೊಯ್ದರು.

ಈ ಸಂದರ್ಭ ಓಂ ಬಿರ್ಲಾ ಪಕ್ಕದಲ್ಲಿ ನಿಂತಿದ್ದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಹಸ್ತಲಾಘವ ಮಾಡಿದರು. ಮೋದಿ ಕೂಡ ಮುಗುಳು ನಗೆ ನಗುತ್ತಾ ರಾಹುಲ್ ಗಾಂಧಿಗೆ ಕೈಕುಲುಕಿದರು. ಬಳಿಕ ಓಂ ಬಿರ್ಲಾ ಅವರನ್ನು ಸ್ಪೀಕ‌ರ್ ಸ್ಥಾನಕ್ಕೆ ಕರೆದೊಯ್ಯಲಾಯಿತು.

ರಾಹುಲ್ ಗಾಧಿಯವರು ಮೋದಿಯವರಿಗೆ ಹಸ್ತಲಾಘವ ಮಾಡಿದಾಗ ಸದಸ್ಯರೆಲ್ಲರೂ ಒಂದು ಕ್ಷಣ ತಬ್ಬಿಬ್ಬಾದರು. ನಿನ್ನೆಯವರೆಗೂ ರಾಜಕೀಯವಾಗಿ ತೀವ್ರ ಟೀಕೆ ಮಾಡಿದ್ದ ಉಭಯ ನಾಯಕರು ನಗುಮೊಗದಿಂದ ಕೈಕೊಟ್ಟಾಗ ಎಲ್ಲರೂ ಬೆಚ್ಚಿಬಿದ್ದರು.