18 ವರ್ಷಗಳ ಹಿಂದೆ ದೂರವಾಗಿದ್ದ ಸಹೋದರನನ್ನು ಹುಡುಕಿಕೊಟ್ಟ Instagram| ಉತ್ತರ ಪ್ರದೇಶದ ಮನಃಕಲಕುವ ಕತೆಯಿದು

ಕಾನ್ಪುರ: ಸಾಮಾಜಿಕ ಜಾಲತಾಣಗಳು ಅನೇಕ ಅನಾಹುತಗಳಿಗೆ ಕಾರಣವಾಗುವ ಘಟನೆಗಳನ್ನು ನಾವು ಗಮನಿಸಿದ್ದೇವೆ. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಕಳೆದುಹೋದ ಸಂಬಂಧಗಳನ್ನು ಮತ್ತೆ ಬೆಸೆಯಲೂ ಸೋಷಿಯಲ್ ಮೀಡಿಯಾ ನೆರವಾಗಿದೆ. ಇನ್‌ಸ್ಟಾಗ್ರಾಂ ರೀಲ್ ಒಂದು ಉತ್ತರ ಪ್ರದೇಶದಲ್ಲಿ ಕಳೆದು ಹೋಗಿದ್ದ ಕುಟುಂಬವನ್ನು ಒಂದುಗೂಡಿಸಿದ ಘಟನೆ ನಡೆದಿದೆ.


ಅಂದಹಾಗೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಕಾನ್ಪುರದ ಹಾತಿಪುರ ಗ್ರಾಮದ ರಾಜಕುಮಾರಿ ಎಂಬ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ನೋಡುತ್ತಿದ್ದರು. ಆಗ ಒಂದು ರೀಲ್ಸ್ನಲ್ಲಿ ಯುವಕನನ್ನು ಕಂಡು ಚಕಿತರಾಗಿದ್ದರು. ಮತ್ತೆ ಮತ್ತೆ ಆ ರೀಲ್ಸ್ ನೋಡಿದ್ದರು. ಆತನ ಪ್ರೊಫೈಲ್‌ಗೆ ಹೋಗಿ ಇಣುಕಿದಾಗ ಆಕೆಯ ಅನುಮಾನ ಮತ್ತಷ್ಟು ಬಲಗೊಂಡಿತ್ತು. ಆ ಯುವಕನ ಮುರಿದ ಹಲ್ಲು, ಈ ಹಿಂದೆ ಕಳೆದುಹೋಗಿದ್ದ ತಮ್ಮ ಬಾಲ ಗೋವಿಂದನ ನೆನಪು ಮಾಡಿಸಿತ್ತು. ಫತೇಪುರದ ಇನಾಯತ್‌ಪುರ ಗ್ರಾಮದ ಬಾಲ ಗೋವಿಂದ, 18 ವರ್ಷಗಳ ಹಿಂದೆ ಮುಂಬಯಿಯಲ್ಲಿ ಕೆಲಸ ಮಾಡಲೆಂದು ಮನೆ ಬಿಟ್ಟು ಹೋಗಿದ್ದ. ಆರಂಭದಲ್ಲಿ ಸ್ನೇಹಿತರ ಜತೆ ಸಂಪರ್ಕದಲ್ಲಿದ್ದರೂ, ಕ್ರಮೇಣ ಎಲ್ಲರ ಜತೆಗಿನ ನಂಟು ಕಡಿದುಕೊಂಡಿದ್ದ. ಮನೆಗೂ ಮರಳಿ ಬಂದಿರಲಿಲ್ಲ.

ಒಂದು ದಿನ ಮುಂಬಯಿಯಲ್ಲಿ ಆತನಿಗೆ ಅನಾರೋಗ್ಯ ಕಾಡಿತ್ತು. ಮನೆಗೆ ವಾಪಸಾಗಲು ಹೊರಟಿದ್ದ. ಅದಕ್ಕಾಗಿ ರೈಲು ಹತ್ತಿದ್ದ. ಆದರೆ ಕಾನ್ಪುರದ ಬದಲು ಆತ ಇಳಿದಿದ್ದ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ. ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಆತ, ಕಂಗಾಲಾಗಿದ್ದ. ಆದರೆ ಆತನಿಗೆ ರೈಲ್ವೆ ನಿಲ್ದಾಣದಲ್ಲಿ ದೇವರ ಹಾಗೆ ಒಬ್ಬರು ಸಿಕ್ಕರು. ಆರೋಗ್ಯ ಸುಧಾರಣೆಯಾದ ಬಳಿಕ ಫ್ಯಾಕ್ಟರಿಯೊಂದರಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದರು. ಕ್ರಮೇಣ ಆತನ ಸ್ಥಿತಿ ಸುಧಾರಿಸಿತು. ಜೈಪುರದಲ್ಲಿಯೇ ಹೊಸ ಬದುಕು ಕಟ್ಟಿಕೊಳ್ಳತೊಡಗಿದ. ಈಶ್ವರಿ ದೇವಿ ಎಂಬಾಕೆಯ ಜತೆ ಮದುವೆಯೂ ಆಯಿತು. ಇಬ್ಬರು ಮಕ್ಕಳು ಸಹ ಜನಿಸಿದರು.

ಆತನ ಬದುಕಲ್ಲಿ ಹತ್ತಾರು ತಿರುವುಗಳು ಉಂಟಾದರೂ, ಆತನ ಮುರಿದ ಹಲ್ಲಿನ ಸ್ಥಿತಿ ಬದಲಾಗಿರಲಿಲ್ಲ. ಈ ವಿಶಿಷ್ಟ ಲಕ್ಷಣವೇ, ಇನ್‌ಸ್ಟಾಗ್ರಾಂನಲ್ಲಿ ರಾಜಕುಮಾರಿಯ ಗಮನ ಸೆಳೆದಿದ್ದು. ಜೈಪುರದ ಅನೇಕ ಸ್ಥಳಗಳಲ್ಲಿ ಗೋವಿಂದ ರೀಲ್ಸ್‌ಗಳನ್ನು ಮಾಡುತ್ತಿದ್ದ. ಅವುಗಳಲ್ಲಿ ಒಂದು ರೀಲ್‌ನಲ್ಲಿ ಆತನ ಪರಿಚಿತ ಮುಖ ರಾಜಕುಮಾರಿಯ ಕಣ್ಣಿಗೆ ಬಿದ್ದಿತ್ತು. ತನ್ನ ಅನುಮಾನವನ್ನು ಪರಿಹರಿಸಿಕೊಳ್ಳಲು ರಾಜಕುಮಾರಿ ಆತನ ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಿದರು. ತನ್ನ ಸಹೋದರ ಹೇಗೆ ಇದ್ದನೋ ಆ ಎಲ್ಲ ಚಹರೆಗಳನ್ನೂ ಆತನಲ್ಲಿ ಹುಡುಕಿದ್ದರು. ಗೋವಿಂದನನ್ನು ಇನ್‌ಸ್ಟಾಗ್ರಾಂ ಮೆಸೆಂಜರ್ ಮೂಲಕ ಸಂಪರ್ಕಿಸಿದರು. ಆರಂಭದಲ್ಲಿ ತಮ್ಮ ಅನುಮಾನಗಳನ್ನು ಹಂಚಿಕೊಂಡ ಕೂಡಲೇ, ಇಬ್ಬರೂ ಬಾಲ್ಯದ ನೆನಪುಗಳನ್ನು ಕೆದಕತೊಡಗಿದರು.

ಇನ್‌ಸ್ಟಾಗ್ರಾಂನಿಂದ ಇಬ್ಬರ ಮಾತುಕತೆ ಫೋನ್ ಕರೆಗೆ ಬದಲಾಯಿತು. ಮನೆಗೆ ಬಾ ಎಂದು ಅಕ್ಕ ಕಣ್ಣೀರಿಟ್ಟಾಗ, ಆತನಿಗೂ ತನ್ನ ಕುಟುಂದೊಂದಿಗಿನ ಭಾವನಾತ್ಮಕ ನಂಟು ನೆನಪಾಯಿತು. 18 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವ ಇನ್‌ಸ್ಟಾಗ್ರಾಮನಿಂದಾಗಿ ಮರಳಿ ಸಿಕ್ಕಿದ್ದ. ಜೂನ್ 20ರಂದು ಜೈಪುರದಿಂದ ರಾಜಕುಮಾರಿ ವಾಸವಿದ್ದ ಹಳ್ಳಿಗೆ ಗೋವಿಂದ ಬಂದಿಳಿದ. ಸುಮಾರು ಎರಡು ದಶಕಗಳಿಂದ ಕುಟುಂಬವನ್ನು ಕಾಡುತ್ತಿದ್ದ ವೇದನೆ ಹೀಗೆ ಅಂತ್ಯಗೊಂಡಿದೆ. ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಬಾಲ ಗೋವಿಂದ ತನ್ನ ಅನೇಕ ಹಳೆಯ ನೆನಪುಗಳನ್ನು ಮರೆತಿದ್ದ. ಕೆಲವೊಂದನ್ನು ಕಷ್ಟಪಟ್ಟು ನೆನಪಿಸಿಕೊಂಡ. ಈಗ ಇನಾಯರ್‌ಪುರದಲ್ಲಿನ ತನ್ನ ಮೂಲದ ಜತೆ ಮತ್ತೆ ಬೆಸೆದುಕೊಳ್ಳುವ ಪ್ರಯತ್ನದಲ್ಲಿದ್ದಾನೆ. ಈ ಘಟನೆ ಈಗ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳು ಪಾಸಿಟಿವ್ ಫೇಸ್ ನ್ನು ಈ ಮೂಲಕ ತೋರಿಸಿವೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.