ಬೆಂಗಳೂರು:ಮಹಿಳೆಯರಿಗೆ ಲೈಂಗಿಕ
ದೌರ್ಜನ್ಯ ನೀಡಿರುವ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಸಮಾಧಾನಕ್ಕೆ
ಕಾರಣವಾಗಿದೆ. ಎಲ್ಲಿಯೇ ಇದ್ದರೂ ದೇಶಕ್ಕೆ ಮರಳಿ ಕಾನೂನು ಪ್ರಕಾರ ವಿಚಾರಣೆ ಎದುರಿಸಲು ಅಮಾನತಾದ ಸಂಸದನಿಗೆ ದೇವೆಗೌಡ ಅವರು ಸಲಹೆ ನೀಡಿದ್ದಾರೆ.
ಈ
ಬಗ್ಗೆ ಅವರು ಬಹಿರಂಗ ಪತ್ರ ಬರೆದಿದ್ದಾರೆ. "ಕುಟುಂಬದ
ಮರ್ಯಾದೆ ಹಾಳಾಗುತ್ತಿದೆ. ನೀನು ಎಲ್ಲಿಯೇ ಇದ್ದರೂ, ದೇಶಕ್ಕೆ ಮರಳು. ನನ್ನ ತಾಳ್ಮೆ, ಸಂಯಮವನ್ನು ಪರೀಕ್ಷೆ ಮಾಡಬೇಡ. ನನ್ನ ಬಗ್ಗೆ ಗೌರವ ಇದ್ದರೆ, ಈ ಕೂಡಲೇ ದೇಶಕ್ಕೆ ವಾಪಸ್
ಬಂದುಬಿಡು. ಪ್ರಕರಣವನ್ನು ಕಾನೂನು ರೀತ್ಯಾ ಎದುರಿಸು. ಇಲ್ಲವಾದಲ್ಲಿ ಕುಟುಂಬದ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಜ್ವಲ್
ಎಲ್ಲಿದ್ದರೂ ಬಂದು ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸು. ಈ
ಎಚ್ಚರಿಕೆಗೆ ತಲೆಬಾಗದಿದ್ದಲ್ಲಿ, ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಕುಟುಂಬದಿಂದ ಹೊರಹಾಕುವ ಕುರಿತು ಪ್ರಜ್ವಲ್ ಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರಜ್ವಲ್
ನನಗೆ, ಕುಟುಂಬಕ್ಕೆ, ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಪಕ್ಷದ ಕಾರ್ಯಕರ್ತರಿಗೆ ಆಘಾತವನ್ನು ತಂದೊಡ್ಡಿದ್ದಾನೆ. ಈ ನೋವಿನಿಂದ ಹೊರಬಂದು
ಮಾತನಾಡಲು ಕೊಂಚ ಸಮಯ ಬೇಕಾಯಿತು. ನಾನು ಈಗಾಗಲೇ ಹೇಳಿದಂತೆ ಕಾನೂನಿನ ಪ್ರಕಾರ ಆತ ತಪ್ಪಿತಸ್ಥನಾಗಿದ್ದರೆ, ಅತ್ಯಂತ ಕಠಿಣ
ಶಿಕ್ಷೆಯಾಗಬೇಕು. ಈ ಬಗ್ಗೆ ಮಾಜಿ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೂ
ಆರೋಪ ಕೇಳಿಬಂದ ಆರಂಭದಿಂದಲೂ ಇದನ್ನೇ ಪ್ರತಿಪಾದಿಸಿದ್ದಾರೆ. ನನ್ನ ನಿಲುವೂ ಕೂಡ ಇದೆ ಆಗಿದೆ ಎಂದಿದ್ದಾರೆ.
ಕೆಲವು
ವಾರಗಳಿಂದ ಜನರು ನನ್ನ ಮತ್ತು ಕುಟುಂಬದ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ನಾನು ಅವರನ್ನು ಟೀಕಿಸಲು ಹೋಗುವುದಿಲ್ಲ.
ಈ ಹಗರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು ಎಂದೂ ಅವರೊಂದಿಗೆ ವಾದಕ್ಕೆ ಇಳಿಯುವುದಿಲ್ಲ ಎಂದು ಹೇಳಿದ್ದಾರೆ.
ಪ್ರಜ್ವಲ್ನ ಚಟುವಟಿಕೆಗಳ ಬಗ್ಗೆ
ನನಗೆ ಯಾವುದೇ ಮಾಹಿತಿಯು ಇರಲಿಲ್ಲ. ಈ ಬಗ್ಗೆ ನಾನು
ಮನವರಿಕೆ ಮಾಡಿಕೊಡಲೂ ಸಾಧ್ಯವಿಲ್ಲ. ಆತನನ್ನು ರಕ್ಷಿಸುವ ಇರಾದೆಯೂ ನನಗೆ ಇಲ್ಲ. ಆತನ ಈಗಿನ ಚಲನವಲನ ಮತ್ತು ವಿದೇಶ ಪ್ರವಾಸದ ಬಗ್ಗೆಯೂ ಗೊತ್ತಿರಲಿಲ್ಲ. ಇದನ್ನು ಜನರಿಗೆ ಅರ್ಥ ಮಾಡಿಸಲೂ ನನಗೆ ಸಾಧ್ಯವಿಲ್ಲ. ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರ ನೀಡುವೆ. ನನಗೆ ದೇವರಲ್ಲಿ ನಂಬಿಕೆ ಇದೆ. ಆ ದೇವರಿಗೆ ಎಲ್ಲಾ
ಸತ್ಯ ತಿಳಿದಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಪ್ರಕರಣದಲ್ಲಿ
ನಡೆದ ರಾಜಕೀಯ ಪಿತೂರಿಗಳು, ಚಿತಾವಣೆಗಳು, ಉತ್ತೇಕ್ಷೆಗಳು ಮತ್ತು ಮಿಥ್ಯಾರೋಪಗಳ ಬಗ್ಗೆ ಈಗ ವಿಶ್ಲೇಷಣೆ ಮಾಡುವುದಿಲ್ಲ.
ಇದೆಲ್ಲವನ್ನು ಮಾಡಿದವರು ದೇವರಿಗೆ ಉತ್ತರಿಸಬೇಕಾಗುತ್ತದೆ. ಇದಕ್ಕೆ ಸೂಕ್ತ ಬೆಲೆಯೂ ತೆರಬೇಕಾಗುತ್ತದೆ. ನನ್ನ ಸತ್ಯ ಮತ್ತು ನೋವಿನ ಹೊರೆಯನ್ನು ಭಗವಂತನ ಪದತಳದಲ್ಲಿ ಇರಿಸಿದ್ದೇನೆ ಎಂದಿದ್ದಾರೆ.
ಆರೋಪಿತನಾಗಿರುವ
ಪ್ರಜ್ವಲ್ ಎಲ್ಲಿದ್ದರೂ ದೇಶಕ್ಕೆ ಬಂದು ಪೋಲಿಸರ ಮುಂದೆ ಶರಣಾಗಬೇಕು, ವಿಚಾರಣೆಯನ್ನು ಎದುರಿಸಬೇಕು. ಇದರಲ್ಲಿ ಯಾವುದೇ ಮುಲಾಜು, ಮರ್ಜಿಯಿಲ್ಲ. ಇದು ನಾನು ಆತನಿಗೆ ಕೊಡುತ್ತಿರುವ ಎಚ್ಚರಿಕೆ. ಆತ ಇದನ್ನು ಪರಿಗಣಿಸದಿದ್ದರೆ,
ನನ್ನ ಮತ್ತು ಕುಟುಂಬದವರೆಲ್ಲರ ಕೋಪಕ್ಕೆ ತುತ್ತಾಗಬೇಕಾಗುತ್ತದೆ ಎಂದು ಹೇಳಿದ್ದಾರೆ.
ಎಸಗಿದ್ದಾನೆ
ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನಿದೆ. ಈ ಎಚ್ಚರಿಕೆಯನ್ನು ಪಾಲಿಸದಿದ್ದರೆ,
ಆತ ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಗೌರವವಿದ್ದಲ್ಲಿ ಕೂಡಲೆ ದೇಶಕ್ಕೆ ಹಿಂದಿರುಗಿ ಬರಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
I have issued a warning to @iPrajwalRevanna to return immediately from wherever he is and subject himself to the legal process. He should not test my patience any further. pic.twitter.com/kCMuNJOvAo
— H D Deve Gowda (@H_D_Devegowda) May 23, 2024

Social Icons