ಬೆಂಗಳೂರು:
ನೈರುತ್ಯ ಪದವೀಧರ ಕ್ಷೇತ್ರದಿಂದ BJP ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಎಂಎಲ್ ಎ ರಘುಪತಿ
ಭಟ್ ವಿರುದ್ಧ ರಾಜ್ಯ ಬಿಜೆಪಿ ಕ್ರಮಕ್ಕೆ ಮುಂದಾಗಿದೆ. ಇದೀಗ ಮೊದಲ ಹಂತವಾಗಿ ಬಿಜೆಪಿ ಶಿಸ್ತು ಸಮಿತಿಯಿಂದ ರಘುಪತಿ ಭಟ್ಗೆ ನೋಟಿಸ್ ಜಾರಿಗೊಳಿಸಿದ್ದು,
ಎರಡು ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ.
ಈ
ಸಂಬಂಧ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಅವರು ಮಾಜಿ ಎಂಎಲ್ಎ, ನೈರುತ್ಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ರಘುಪತಿ ಭಟ್ಗೆ ನೋಟಿಸ್ ನೀಡಿದ್ದು,
ಶಿಸ್ತು ಸಮಿತಿ ಮುಂದೆ ಬಂಡಾಯ ಸ್ಪರ್ಧೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ಕೇಳಿದ್ದಾರೆ. 2 ದಿನಗಳ ಒಳಗಾಗಿ
ಸ್ಪಷ್ಟೀಕರಣ ನೀಡುವಂತೆ ನೋಟಿಸ್ ಜಾರಿಗೊಳಿಸಲಾಗಿದೆ.
ಇಂದು
ಬೆಳಗ್ಗೆಯಷ್ಟೇ ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ಕಣದಿಂದ 24 ಗಂಟೆಯೊಳಗೆ ನಿವೃತ್ತಿ ಘೋಷಿಸಿ ಇಲ್ಲವೇ ಪಕ್ಷದ ಶಿಸ್ತು ಉಲ್ಲಂಘನೆಗಾಗಿ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಕೆ ರಘುಪತಿ ಭಟ್ಗೆ BJP ರಾಜ್ಯ
ಪ್ರಧಾನ ಕಾರ್ಯದರ್ಶಿ ವಿ ಸುನೀಲ್ ಕುಮಾರ್
ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ಈ ನೋಟಿಸ್ ಜಾರಿಯಾಗಿದೆ.
ಈ
ಬಾರಿಯ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಮಾಜಿ ಬಿಜೆಪಿ ಶಾಸಕ ರಘುಪತಿ ಭಟ್ ನಿರ್ಧರಿಸಿದ್ದರು. ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಟಿಕೆಟ್ ಕೈತಪ್ಪಿ ಶಿವಮೊಗ್ಗದಲ್ಲಿ ಮಕ್ಕಳ ತಜ್ಞರಾಗಿರುವ ಡಾ.ಧನಂಜಯ ಸರ್ಜಿ
ಅವರಿಗೆ BJP ಹೈಕಮಾಂಡ್
ಟಿಕೆಟ್ ನೀಡಿತ್ತು. ಇದನ್ನು ವಿರೋಧಿಸಿದ್ದ ರಘುಪತಿ ಭಟ್ ಟಿಕೆಟ್ ಬೇಡಿಕೆ ಇಟ್ಟರು. ಇದನ್ನು ಬಿಜೆಪಿ ಪರಿಗಣಿಸದೇ ಇದ್ದರಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದರು. ಅವರ ಮನವೊಲಿಕೆ ಪ್ರಯತ್ನ ನಡೆಸಿದರೂ ಸಫಲವಾಗಲಿಲ್ಲ. ನಾಮಪತ್ರ ವಾಪಸ್ ಪಡೆಯದೇ ಕಣದಲ್ಲಿ ಉಳಿದ ಹಿನ್ನೆಲೆಯಲ್ಲಿ ಈಗ ನೋಟಿಸ್ ಜಾರಿಗೊಳಿಸಿ
ಸ್ಪಷ್ಟೀಕರಣ ನೀಡುವಂತೆ ಸೂಚಿಸಲಾಗಿದೆ. ನೋಟಿಸ್ ನೀಡಿರುವುದು ಮೊದಲ ಹಂತವಾಗಿದ್ದು, ಸ್ಪಷ್ಟೀಕರಣದ ನಂತರ ಕ್ರಮಕ್ಕೆ BJP ಮುಂದಾಗಲಿದೆ.

Social Icons