ಜೂನ್ 6ಕ್ಕೆ ಕರ್ನಾಟಕಕ್ಕೆ ಮುಂಗಾರು ಎಂಟ್ರಿ: KARNATAKA RAIN FORECAST

 



KANNADA ALERT DESK

ಬೆಂಗಳೂರು : ಪೂರ್ವ ಮುಂಗಾರು ಮಾರುತಗಳು ಕೇರಳ ಕರಾವಳಿಗೆ ಲಗ್ಗೆ ಇಟ್ಟಿದ್ದು, ಅಲ್ಲಿ ಭಾರಿ ವರ್ಷಧಾರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ  ಕೂಡ ಮಳೆಯಾಗುತ್ತಿದೆ. ಕೇರಳದಲ್ಲಿ ಜೂನ್ 1 ಕ್ಕೆ ಮುಂಗಾರು ಆಗಮನವಾಗಲಿದ್ದು,  ಪ್ರತೀ ವರ್ಷದಂತೆ ರಾಜ್ಯದಲ್ಲಿ ಮುಂಗಾರು ಮಳೆ ಜೂನ್ 6 ಅಥವಾ 7 ರಂದು ಪ್ರಾರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 

ಇನ್ನೂ 7 ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಪೂರ್ವ ಮುಂಗಾರು ಮಳೆಯಾಗಲಿದೆ. ಹಾಸನ, ಕೊಡಗು, ಮೈಸೂರು, ಉಡುಪಿ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಸಣ್ಣ ಮಟ್ಟಿನ ಮಳೆಯಾಗಲಿದೆ. ಮೇಲ್ಮೈ ಮಾರುತಗಳ ಪರಿಣಾಮ ಧಾರವಾಡ, ಗದಗ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 


 

ಉಳಿದಂತೆ ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಮಂಡ್ಯ, ರಾಮನಗರದಲ್ಲಿ 30 ರಿಂದ 40 ಕಿ. ಮೀ. ವೇಗದಲ್ಲಿ ಗಾಳಿಯು ಬೀಸಲಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳ ಕಾಲ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಂತರ ರಾಜ್ಯಾದ್ಯಂತ 2 ರಿಂದ 3 ಡಿಗ್ರಿ ಕ್ರಮೇಣ ಕುಸಿಯಲಿದೆ ಎಂದು ತಿಳಿಸಿದೆ.

 

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವು ಇರಲಿದೆ. ಹಗುರವಾದ ಮಳೆ ಆಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 32 ಡಿಗ್ರಿ ಮತ್ತು 22 ಡಿಗ್ರಿಯಷ್ಟು ಇರಲಿದೆ ಎಂದು ಮಾಹಿತಿ ನೀಡಿದೆ.

ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎನ್ ಪುವಿಯರಸನ್ ಮಾತನಾಡಿ ''ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೇರಳದ ಮೇಲೆ ಮಾನ್ಸೂನ್ ಆರಂಭಕ್ಕೆ ಪರಿಸ್ಥಿತಿಗಳು ಅನುಕೂಲಕರವಾಗಿವೆ. ದಕ್ಷಿಣ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶದ ಉಳಿದ ಭಾಗಗಳಿಗೆ ಮಾರುತಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಲಕ್ಷದ್ವೀಪ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾದ ಸಮಯದಲ್ಲಿ ಪ್ರಾರಂಭವಾಗಲಿದೆ'' ಎಂದು ಹೇಳಿದ್ದಾರೆ.

 

ರಾಜ್ಯದಲ್ಲಿ ಉತ್ತಮ ಪೂರ್ವ ಮುಂಗಾರು ಮಳೆ: ಈ ಬಾರಿ ವಾಡಿಕೆಗಿಂತ ಹೆಚ್ಚು ಪೂರ್ವ ಮುಂಗಾರು ಮಳೆ ರಾಜ್ಯದಲ್ಲಿ ಆಗಿದೆ. ಮಾರ್ಚ್ 1 ರಿಂದ ಮೇ ಅಂತ್ಯದವರೆಗೆ ಹಲವು ಕಡೆ ವಾಡಿಕೆಯ ಶೇಕಡಾ 50 ಕ್ಕಿಂತ ಹೆಚ್ಚು ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಅತಿ ಹೆಚ್ಚು ಮಂಗಳೂರಿನ ಪಣಂಬೂರಿನಲ್ಲಿ 366 ಎಂ. ಎಂ, ಚಿಕ್ಕಮಗಳೂರಿನಲ್ಲಿ 363 ಎಂ. ಎಂ ದಾಖಲೆ ಮಳೆ ಸುರಿದಿದೆ. ನಂತರದ ಸ್ಥಾನದಲ್ಲಿ ಮಂಗಳೂರು ವಿಮಾನ ನಿಲ್ದಾಣದ ಪ್ರದೇಶ 282 ಎಂ. ಎಂ ಮತ್ತು ಆಗುಂಬೆಯಲ್ಲಿ 279 ಎಂ.ಎಂ ದಾಖಲಿಸಿವೆ. ಕಾರವಾರದಲ್ಲಿ ಮತ್ತು ಕೊಪ್ಪಳದಲ್ಲಿ ಅತಿ ಕಡಿಮೆ ಮಳೆ ಸುರಿದಿದೆ.

 

ಬೆಂಗಳೂರು ಜಿಲ್ಲೆಯ ವ್ಯಾಪ್ತಿಯಲ್ಲೂ ಪೂರ್ವ ಮುಂಗಾರು ಮಳೆ ಉತ್ತಮವಾಗಿದೆ. ಬೆಂಗಳೂರು ನಗರದಲ್ಲಿ ಪೂರ್ವ ಮುಂಗಾರು ಮಳೆ 181 ಎಂ. ಎಂ ದಾಖಲು ಆಗಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಸುತ್ತಮುತ್ತ 157 ಎಂ. ಎಂ ಮತ್ತು ಜಿಕೆವಿಕೆ ಸುತ್ತಲೂ 191 ಎಂ. ಎಂ ಮಳೆಯು ಸುರಿದಿದೆ.